ಶಿವಮೊಗ್ಗ : ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ನಗರದಲ್ಲಿ ಫ್ಲೆಕ್ಸ್ ಹಾವಳಿ ಮಿತಿ ಮೀರಿತ್ತು. ಸಾರ್ವಜನಿಕ ಕಾರ್ಯಕ್ರಮಗಳ ಫ್ಲೆಕ್ಸ್ ಜೊತೆಗೆ ಜನಪ್ರತಿನಿಧಿಗಳು, ಸ್ವಯಂ ಘೋಷಿತ ನಾಯಕರ ಜನ್ಮದಿನಾಚರಣೆ ಶುಭಾಶಯಗಳ ಫ್ಲೆಕ್ಸ್, ಕಟೌಟ್ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ರಾತ್ರಿ ಬೆಳಗಾಗುವುದರೊಳಗೆ ಎದ್ದು ನಿಲ್ಲುತ್ತಿತ್ತು. ಇವುಗಳಲ್ಲಿ ಬಹುತೇಕ ಅನಧಿಕೃತ ಫ್ಲೆಕ್ಸ್ ಆದ್ದರಿಂದ ಅವುಗಳ ತೆರವು ಮಾಡುವುದೇ ಪಾಲಿಕೆ ಅಧಿಕಾರಿಗಳ ಬೆಳ್ಳಂಬೆಳಿಗ್ಗಿನ ಕೆಲಸವಾಗಿತ್ತು! ನಗರದ ಸೌಂದರ್ಯಕ್ಕೆ, ಸುಗಮ ಸಂಚಾರದ ವ್ಯವಸ್ಥೆಗೆ ತೊಡಕಾಗಿರುವ ಅವುಗಳಿಗೆ ಕಡಿವಾಣ ಯಾವಾಗ ಎಂಬುದು ಪ್ರಜ್ಞಾವಂತ ನಾಗರಿಕರ ಅಹವಾಲಾಗಿತ್ತು.

ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ಶಿವಮೊಗ್ಗ ನಗರದ ಶಾಸಕರ ಹುಟ್ಟು ಹಬ್ಬ ಇತ್ತು. ಶಾಸಕರ ಹುಟ್ಟು ಹಬ್ಬ ಎಂದ ಮೇಲೆ ನಗರದ ವೃತ್ತಗಳು, ರಸ್ತೆ ಡಿವೈಡರ್, ಪಾದಾಚಾರಿ ಮಾರ್ಗ ಎಲ್ಲಾ ಫ್ಲೆಕ್ಸ್ಗಳಿಂದ ತುಂಬಿ ಸಾರ್ವಜನಿಕರಿಗೆ ಅನಿವಾರ್ಯ ಸಹಿಸುವಿಕೆ ಅನುಭವ ಆಗಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಗರದಲ್ಲಿ ಒಂದೇ ಒಂದು ಅಭಿಮಾನಿಗಳ ತೋರಿಕೆಯ ಶುಭಾಶಯ ಕೋರಿದ ಫ್ಲೆಕ್ಸ್ ಇರಲಿಲ್ಲ, ಕಟೌಟ್ ಇರದಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ ಎಂದಿದ್ದಾರೆ.
ಶಾಸಕರೂ ತಮ್ಮ ದೈನಂದಿನ ನಗರ ವೀಕ್ಷಣೆ ಕಾರ್ಯ ಬಿಡಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ, ಸ್ಥಳೀಯ ಪತ್ರಿಕೆ ಜಾಹೀರಾತು ಮೂಲಕ ಒಂದಿಷ್ಟು ಜನ ಶುಭಾಷಯ ಕೋರಿದರು. ಒಂದಿಷ್ಟು ಜನರು ನೇರ ಭೇಟಿಮಾಡಿ ಶುಭಾಶಯ ತಿಳಿಸಿದರು. ಒಂದಿಷ್ಟು ಜನ ಮನದಲ್ಲೆ ಹಾರೈಸಿ ಖುಷಿಪಟ್ಟರು. ಎಲ್ಲವೂ ವೈಯಕ್ತಿಕವಾಗಿಯೆ ನಡೆದಿರುವುದು ಮಾದರಿಯಾಗಿದೆ ಎಂದಿದ್ದಾರೆ.

ಸ್ಥಳೀಯ ಸಂಸ್ಥೆಯ ನಿಯಮ ತಮಗೆ ಅನ್ವಯಿಸುವುದಿಲ್ಲ ಎಂಬಂತೆ ತೋರಿಸದೆ ಎಲ್ಲರಿಗೂ ಒಂದೇ ನಿಯಮ ಎನ್ನುವುದನ್ನು ತಮ್ಮ ಅಭಿಮಾನಿ ಬಳಗದ ಮೂಲಕ ತೋರಿಸಿಕೊಟ್ಟರು. ಹಿಂದಿನಿಂದಲೂ ಪ್ಲಾಸ್ಟಿಕ್ ಶೀಟ್ ಬಳಸಿದ ಹೂಗುಚ್ಛ, ಸ್ಮರಣಿಕೆಗಳನ್ನು ಸ್ವೀಕರಿಸಲು ನಯವಾಗಿ ನಿರಾಕರಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಸಂದೇಶ ನೀಡುತ್ತಿರುವ ಶಾಸಕರ ನಡೆ ರಾಜ್ಯದ ಇತರೆ ಜನಪ್ರತಿನಿಧಿಗಳಿಗೆ, ಜನಸಾಮಾನ್ಯರಿಗೆ ಮಾದರಿಯಾಗಲಿ ಎಂದು ನಾಗರೀಕರ ಆಶಯವಾಗಿದೆ.