ಶಿವಮೊಗ್ಗ : ಶಿವಮೊಗ್ಗ ಪ್ರೆಸ್ಟ್ರಸ್ಟ್ವತಿಯಿಂದ ಜು.31ರಂದು ಬೆಳಿಗ್ಗೆ 10-30ಕ್ಕೆ ಪ್ರೆಸ್ಟ್ರಸ್ಟ್ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುವುದು ಎಂದು ಟ್ರಸ್ಟಿನ ಕಾರ್ಯದರ್ಶಿ ನಾಗರಾಜ್ ನೇರಿಗೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪ್ರತಿಭಾ ಪುರಸ್ಕಾರ, ವೃತ್ತಿಬಂಧುಗಳಿಗೆ ಸನ್ಮಾನ, ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಜೊತೆಗೆ ದಿವಂಗತ ಶಿವಮೊಗ್ಗ ನಂದನ್ ನೆನಪಿನಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಪಿ. ತ್ಯಾಗರಾಜ್, ನೆರವೇರಿಸಿ ಉಪನ್ಯಾಸ ನೀಡುವರು. ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಹಿರಿಯ ವಾರ್ತಾಧಿಕಾರಿ ಆರ್. ಮಾರುತಿ ವಹಿಸಲಿದ್ದು, ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು ಎಂದರು.

ಒಂದು ಪತ್ರಿಕೆ ಪ್ರಕಟವಾಗಲು ಹಲವರ ಶ್ರಮ ಇರುತ್ತದೆ. ಫೋಟೋ ಗ್ರಾಫರ್, ವಿತರಕರು, ಮುದ್ರಣ ವಿಭಾಗ, ಜಾಹೀರಾತು, ಗ್ರಾಫಿಕ್ ಡಿಜೇನರ್ ಇವುಗಳೆಲ್ಲವೂ ಮುಖ್ಯವಾಗುತ್ತವೆ. ಈ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಮಾಡಿದ ಹಲವು ವೃತ್ತಿಬಂಧುಗಳಿಗೆ ಟ್ರಸ್ಟ್ವತಿಯಿಂದ ಸನ್ಮಾನಿಸಲಾಗುವುದು ಎಂದರು.

ಇವರಲ್ಲಿ ಮುಖ್ಯವಾಗಿ ಶಿಕಾರಿಪುರ ಸರ್ವಜ್ಞ ಪತ್ರಿಕೆಯ ಸಂಪಾದಕ ಎಸ್.ಬಿ. ಮಠದ್, ಜೇಂಕಾರ್ ಅಡ್ವೆಟೈಸರ್ಸ್ನ ವ್ಯವಸ್ಥಾಪಕ ನಿರ್ದೇಶಕ ನರೇಶ್ಕುಮಾರ್ ಟಿ.ಎ., ವಿಜಯ ಕರ್ನಾಟಕ ಪತ್ರಿಕೆಯ ಮುದ್ರಣ ವಿಭಾಗದ ವ್ಯವಸ್ಥಾಪಕ ನಾಗಪ್ಪಗೌಡ್ರು, ಡಿಸೈಜನರ್ ಎಂ.ಸಿ. ರಾಜು, ಕನ್ನಡ ಪ್ರಭ ಜಾಹೀರಾತು ವಿಭಾಗದ ಕಾರ್ತೀಕ್ ಚಂದ್ರಮೌಳಿ, ವಿಜಯವಾಣಿಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ರಿಪಬ್ಲಿಕ್ ಕನ್ನಡದ ವೀಡಿಯೋ ಜರ್ನಲಿಸ್ಟ್ ಚಿರಾಗ್, ಹಿರಿಯ ಪತ್ರಿಕಾ ವಿತರಕ ಮಂಜುನಾಥ್ ಬಿ. ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.

ಹಾಗೆಯೇ ಪತ್ರಕರ್ತರ ಮಕ್ಕಳು ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರನ್ನು ಕೂಡ ಸನ್ಮಾನಿಸಲಾಗುತ್ತದೆ. ಈಗಾಗಲೇ ಸುಮಾರು 11ಕ್ಕೂ ಹೆಚ್ಚು ಮಕ್ಕಳು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಜೇಸುದಾಸ್, ಸಂತೋಷ್ ಕಾಚಿನಕಟ್ಟೆ, ಗೋ.ವ. ಮೋಹನ್, ಕಿರಣ್ ಕಂಕಾರಿ, ಆರಗ ರವಿ ಇದ್ದರು.