ಶಿವಮೊಗ್ಗ: ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಆ. 9 ಮತ್ತು 10ರಂದು ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಶಿವಮೊಗ್ಗ ಓಪನ್ 6ನೇ ಅಂತರ ರಾಷ್ಟ್ರೀಯ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಗೆ ಅಮೆರಿಕ, ಶ್ರೀಲಂಕಾ, ನೇಪಾಳ ಸೇರಿದಂತೆ ಭಾರತದ 12 ರಾಜ್ಯಗಳಿಂದ ಸುಮಾರು 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸುತ್ತಿದ್ದು, ಪಂದ್ಯಾವಳಿಯಲ್ಲಿ ಕತಾ ಮತ್ತು ಕುಮತಿ ವಿಭಾಗಗಳು ಇದ್ದು, 6ರಿಂದ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ ಎಂದರು.

ಪಂದ್ಯಾವಳಿಗೆ ಭಾರತದ ಖ್ಯಾತ ಚಿತ್ರ ನಟ ಹಾಗೂ ಕರಾಟೆ ಬ್ಲಾಕ್ ಬೆಲ್ಟ್ ಸುಮನ್ ತಲ್ವಾರ್ ಮತ್ತು ಅಮೆರಿಕದಿಂದ ಗ್ರಾಂಡ್ ಮಾಸ್ಟರ್ ಆಗಮಿಸುತ್ತಿದ್ದು, ಶಿವಮೊಗ್ಗದ ಸ್ಥಳೀಯ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಆಕರ್ಷಕ ಪದಕ ಮತ್ತು ಟ್ರೋಫಿ, ಪ್ರಮಾಣ ಪತ್ರ ನೀಡಲಾಗುವುದು, ಮತ್ತು ಅತಿ ಹೆಚ್ಚು ಸ್ಪರ್ಧಿಗಳನ್ನು ಹೊಂದಿರುವ ತಂಡಕ್ಕೆ ವಿಶೇಷ ಬಹುಮಾನ ಸೇರಿದಂತೆ ಒಟ್ಟಾರೆ ಚಾಂಪಿಯನ್ ಶಿಪ್ ಟ್ರೋಫಿ ನೀಡಲಾಗುವುದು. ಪಂದ್ಯಾವಳಿಯಲ್ಲಿ ಸ್ಪÀರ್ಧಿಗಳಿಗೆ ವಸತಿ, ಊಟ ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ ಸಹ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಏಷ್ಯನ್ ಮತ್ತು ರಾಷ್ಟ್ರೀಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದೇವರಾಜ್ ನಾಯ್ಕ್ ಮಂಡೇನಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.