
ಪ್ರೀತಿ ಫುಲ್ ಸ್ಟಾಪ್ ಆದ್ರೆ ಪ್ರೇಮಕೆ ಕಾಮ…!
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 51
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಪ್ರೀತಿ ಪ್ರೇಮ ಎಲ್ಲಾ ಬದನೆಕಾಯಿ ಎಂದು ಉಪೇಂದ್ರ ಸಿನಿಮಾ ಒಂದರ ಡೈಲಾಗ್ ಇಲ್ಲಿ ಬೇಕಿಲ್ಲ. ಪ್ರೀತಿ ಪ್ರೇಮ ಎಂಬುದು ಯಾವಾಗಲೂ ಯಾರೋ ಒಬ್ಬರ ಪರವಾಗಿ ಹೆಚ್ಚಾಗಿ ನಿಲ್ಲುತ್ತದೆ. ಹುಡುಗ- ಹುಡುಗಿ ಪುರುಷ ಅಥವಾ ಮಹಿಳೆ ಇವರಿಬ್ಬರ ನಡುವೆ ಒಂದೆಡೆ ಅತಿ ಹೆಚ್ಚು ಸೆಳೆತದ ಈ ಪ್ರೀತಿ ಪ್ರೇಮ ಮತ್ತೊಂದೆಡೆ ನಾನಾ ಮುಖಗಳನ್ನು ಕಳಚಿರುತ್ತದೆ. ಇಲ್ಲಿ ಪ್ರೀತಿ ಒಂದು ಮುಖವಾದರೆ ಪ್ರೇಮಕ್ಕೆ ಕಾಮದ ಗುಟುಕೇ ಆಧಾರ ಎಂಬುದು ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಸ್ತು ವಿಷಯ.

ನಾವು ಈ ಸಮಾಜದಲ್ಲಿ ಪ್ರೀತಿ ಪ್ರೇಮ, ಬಾಂಧವ್ಯ ಸಂಬಂಧ ಎಲ್ಲವನ್ನು ಬಗೆಬಗೆಯಾಗಿ ನೋಡಿದ್ದೇವೆ. ಒಂದು ಬಗೆಯ ಸಂಬಂಧ ಮತ್ತೊಂದು ಕಡೆ ತದ್ವಿರುದ್ಧವಾಗಿರುತ್ತದೆ. ನಾನಾ ಮುಖಗಳನ್ನು ಅದು ತೋರಿಸುತ್ತದೆ.

ಇಲ್ಲಿ ಗಂಡು ಹೆಣ್ಣಿನ ನಡುವೆ ಕಾಣಿಸಿಕೊಳ್ಳುವ ಬಾಂಧವ್ಯ ಸಂಬಂಧ ಪ್ರೀತಿ ಹಾಗೂ ಪ್ರೇಮದ ಅಮಲಲ್ಲಿ ನರ್ತಿಸುತ್ತವೆ. ಕಷ್ಟವಿದ್ದಾಗ ಒಂದೊಂದು ಬಗೆಯ ವರ್ತನೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ ಕಾಣುತ್ತಿದ್ದೇವೆ.
ಕೈ ಕೊಡುವ ಹುಡುಗಿ ಎಂದು ಮುಖಕ್ಕೆ ರಾಚುವಂತೆ ಮಾತನಾಡುವ ನಮ್ಮ ಸಮಾಜದ ಒಂದು ಮುಖ ಕೈಕೊಡುವ ಹುಡುಗನ ಬಗ್ಗೆ ಮೋಸ ಮಾಡುವ ವಂಚಕನ ಬಗ್ಗೆ ಯಾಕೆ ಉಸಿರೆತ್ತುವುದಿಲ್ಲ ಎಂಬ ಗಂಭೀರ ಪ್ರಶ್ನೆಯು ನಮ್ಮ ನಡುವೆ ಹಾಗೆಯೇ ನಿಲ್ಲುತ್ತದೆ ಅಲ್ಲವೇ?

ಒಂದೊಂದು ಬಗೆಯ ಈ ಬಾಂಧವ್ಯ ಹೊಸ ಹೊಸ ತಿರುವುಗಳನ್ನು ಪಡೆಯುತ್ತದೆ. ಹಾಗೆಯೇ ತ್ಯಾಗದ ಹೆಸರಲ್ಲಿ ಪ್ರೀತಿ ಎಂಬ ಸಂಬಂಧಕ್ಕೆ ಅಂತ್ಯದ ಫುಲ್ ಸ್ಟಾಪ್ ನೀಡಲಾಗುತ್ತದೆ. ಪ್ರೀತಿ ಪ್ರೇಮದ ವಿಷಯದಲ್ಲಿ ಫುಲ್ ಸ್ಟಾಪ್ ಗಿಂತ ಕಾಮವೇ ಹೆಚ್ಚಾಗಿ ಭಾಷೆಯ ಚಿಹ್ನೆಯಾಗಿ ಬಳಕೆಯಾಗುತ್ತಿರುವುದು ಒಂದು ಬಗೆಯ ನಗೆಯ ವಿಷಯವೇ ಹೌದು.
ಫುಲ್ ಸ್ಟಾಪ್ ಅಂದರೆ ಪೂರ್ಣ ವಿರಾಮ. ಒಂದು ವಾಕ್ಯವನ್ನು ಸಮಗ್ರವಾಗಿ ಹೇಳಿ ಮುಗಿಸುವ ಕಾರ್ಯ. ಆದರೆ ಅಲ್ಪ ವಿರಾಮ ಅಂದರೆ ಕಾಮ ಎಂಬುದು ಇನ್ನಷ್ಟು ಇದೆ ಸಂಪೂರ್ಣವಾಗಿಲ್ಲ ಎಂಬ ಮಾಹಿತಿಯನ್ನು ನೀಡುವ ಚಿಹ್ನೆ ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರೀತಿ ಪ್ರೇಮದಲ್ಲಿ ಅಂತ್ಯ ಎಂಬುದು ಇಲ್ಲ ಅಲ್ಪ ವಿರಾಮವೇ ಇದರ ಬಹುತೇಕ ಬಳಕೆಯ ಬದುಕಿನ ಶೈಲಿ ಎಂದರೆ ತಪ್ಪಾಗಲಿಕ್ಕಿಲ್ಲ.
ನಾವು ಸಾಕಷ್ಟು ನೋಡಿದಂತೆ ಇಂದಿನ ಸಮಾಜದ ಜನಮಾನಸದಲ್ಲಿ ಹಿಂದಿದ್ದ ಪ್ರೀತಿ ಹಾಗೂ ಅಂದಿದ್ದ ಸಂಸ್ಕಾರದ ವರ್ತನೆ ಇಂದಿನ ದಿನಮಾನಗಳಲ್ಲಿ ಬದಲಾವಣೆಯಾಗಿದೆ. ಮಾತು ಎತ್ತಿದರೆ ಫೈನಲ್ ವ್ಯವಹಾರಗಳು, ವಾರಕ್ಕೆ ತಿಂಗಳಿಗೆ ಬೇಸರವಾದರೆ ಟಾಟಾ ಬಾಯ್ ಬಾಯ್, ಮತ್ತೆ ಇಷ್ಟವಾದರೆ ಹಾಯ್ ಹಲೋ ಎಂದು ಆರಂಭಗೊಳ್ಳುವ ಇಂತಹ ಕಾರ್ಯಗಳನ್ನು ನಾವು ಪ್ರೀತಿ ಎಂಬ ಹೆಸರಲ್ಲಿ ಕರೆಯುವುದಾದರೂ ಹೇಗೆ ಎಂಬ ಒಂದಿಷ್ಟು ಅನುಮಾನಗಳು ನಮ್ಮನ್ನು ಕಾಡುತ್ತಿವೆ ಅಲ್ಲವೇ?
ಇಂದಿನ ಸಮಾಜದ ಆಧುನಿಕ ಲೋಕ ನಮ್ಮನ್ನು ಹೊಸ ತಂಡ ಹೆಜ್ಜೆಯಲ್ಲಿ ಸಾಗಿಸುತ್ತಿದೆ ಹಾಗೆಯೇ ಆ ಹೆಜ್ಜೆ ನಮ್ಮ ನಡುವೆ ನಾನಾ ಗೊಂದಲಗಳನ್ನು ಅವಾಂತರಗಳನ್ನು ಸೃಷ್ಟಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಬದಲಾವಣೆಯಾದ ಸಾಹಿತ್ಯ ಬದಲಾವಣೆಯಾದ ಬದುಕಿನ ಶೈಲಿ ಹಾಗೂ ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳು ನಮ್ಮ ನಡುವಿನ ಮನದ ಮಾತನ್ನು ನಮಗೆ ಕೇಳಿಸದಂತೆ ಮಾಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರೀತಿ ಎದೆಯ ಗೂಡೊಳಗೆ ಬಚ್ಚಿಟ್ಟುಕೊಳ್ಳುವ ಬದುಕಾಗಬೇಕು.
ಇಲ್ಲಿ ಸಮಾಜದ ಸರ್ವರನ್ನೂ ಉಲ್ಲೇಖಿಸಿ, ಎಲ್ಲರನ್ನೂ ಅವಲೋಕನ ಮಾಡಿ ಹೇಳುವ ಮಾತಲ್ಲ ಇದು. ನಮ್ಮ ನಡುವಿನ ಕೆಲವೇ ಕೆಲವರ ಇಂತಹ ವರ್ತನೆಗಳು ಸಮಾಜದ ಮುಖ್ಯ ಜಾಲತಾಣಗಳಲ್ಲಿ ಅತಿ ದೊಡ್ಡ ವಿಷಯವಾಗಿ ಪರಿಗಣಿತವಾಗುತ್ತವೆ.

ಹಾಗಾಗಿ ಪ್ರೀತಿ ಎಂಬುದು ಎಂದಿಗೂ ಮುಗಿಯದ, ಮುಗಿಸಲಾಗದ ಬಾಂಧವ್ಯ ಎಂಬುದು ಸರಿ. ಪ್ರೇಮ ಎಂಬುದಕ್ಕೆ ಕಾಮದ ದೈಹಿಕ ಆಕರ್ಷಣೀಯ ಗುಟುಕು ಹನಿ ಬಿದ್ದರೆ ಅದು ಅವಿಸ್ಮರಣೀಯ ಪ್ರೀತಿ ಆಗಬಹುದು ಬಾಂಧವ್ಯವಾಗಬಹುದು ನೆನಪುಗಳಲ್ಲಿ ಹಾಗೂ ಜನಮಾನುಸದಲ್ಲಿ ಉಳಿಯಬಹುದಾದ ವಿಷಯವಾಗಬಹುದಲ್ಲವೇ?