ಶಿವಮೊಗ್ಗ : ದೂರದೃಷ್ಟಿಯ ವೈಜ್ಞಾನಿಕ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯಿಂದ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಆಡಳಿತ ವೈಖರಿ ಅನುಕರಣೀಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಮಹಾಸ್ವಾಮೀಜಿಯವರು ಹೇಳಿದ್ದಾರೆ.
ಅವರು ಇಂದು ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶಿವಮೊಗ್ಗ ಶಾಖೆ ಮತ್ತು ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ನೀರಿನ ವ್ಯವಸ್ಥೆ ಕಲ್ಪಿಸಿದಾಗ ಸಾಮಾಜಿಕ ಜೀವನ ವ್ಯವಸ್ಥಿತವಾಗಿ ನಡೆಯುತ್ತದೆ ಮತ್ತು ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಈ ದೂರದೃಷ್ಟಿಯಿಂದ ಕೆಂಪೇಗೌಡರ ಬೆಂಗಳೂರಿನ ಸುತ್ತಮುತ್ತಲು ೮ ಬೃಹತ್ ಕೆರೆಗಳನ್ನು ನಿರ್ಮಿಸಿ, ೨೬೦ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು ಕಟ್ಟಿಸಿ, ಬೆಂಗಳೂರಿನ ಸುತ್ತಲೂ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಿ, ಐದು ಕಿರುದ್ವಾರಗಳ ನಿರ್ಮಾಣ, ಬೃಹತ್ ದೇವಾಲಯಗಳ ನಿರ್ಮಾಣ, ಎಲ್ಲಾ ಸಮಾಜಕ್ಕೂ ಅವರವರ ಕೌಶಲ್ಯಕ್ಕೆ ಸರಿಯಾಗಿ ಮಾರುಕಟ್ಟೆಗಳ ನಿರ್ಮಾಣವನ್ನು ಮಾಡಿ, ಆದರ್ಶ ಆಡಳಿತವನ್ನು ನೀಡಿದರು. ಇಂದು ಬೆಂಗಳೂರು ವಿಶ್ವದ ದೃಷ್ಟಿಯಲ್ಲಿ ಸಿಲಿಕಾನ್ ಸಿಟಿಯಾಗಲು ಕೆಂಪೇಗೌಡರ ಪಾತ್ರ ಮಹತ್ವದ್ದು ಎಂದರು.

ಅವರ ಆದರ್ಶವನ್ನು ಜೊತೆಯಾಗಿಟ್ಟುಕೊಂಡು ಆದಿಚುಂಚನಗಿರಿ ಸಂಸ್ಥಾನ ಕೂಡ ಸರ್ವ ಜನಾಂಗದ ಶಾಂತಿಯ ತೋಟವಾಗಿ ಯಾವುದೇ ಧರ್ಮ, ಮತ, ಬೇಧವಿಲ್ಲದೆ ಒಂದು ಲಕ್ಷದ ಅರವತ್ತೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿಸುತ್ತಿದೆ. ೩೫೦೦ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಿದೆ. ಎಲ್ಲೂ ಕೂಡ ನಮ್ಮ ಸಂಸ್ಥಾನದಲ್ಲಿ ಜಾತಿ, ಮತಗಳ ಸಮಸ್ಯೆ ಬಂದಿಲ್ಲ. ಎಲ್ಲರನ್ನೂ ಜೊತೆಗೂಡಿಸುವ ಸಂಸ್ಥಾನ ಆದಿ ಚುಂಚನಗಿರಿಯಾಗಿದೆ. ಅಲ್ಲದೆ ಈ ಭಾರಿಯಿಂದ ಜಿಲ್ಲಾ ಮಟ್ಟದಲ್ಲಿ ಕೆಂಪೇಗೌಡ ಪ್ರಶಸ್ತಿಯನ್ನೂ ಕೂಡ ನೀಡಲಾಗಿದೆ. ಬೆಂಗಳೂರಿನಲ್ಲಿ ೧೦೮ ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ನಿರ್ಮಿಸಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟದ್ದು ನಮ್ಮ ಸಮುದಾಯಕ್ಕೆ ಇತಿಹಾಸದ ಪುಟ ತೆರೆದು ಕೆಂಪೇಗೌಡರ ಬಗ್ಗೆ ಅಧ್ಯಯನ ಮಾಡೋಣ ಎಂದರು.
ಕೆಂಪೇಗೌಡ ಪ್ರಶಸ್ತಿ ಸ್ವೀಕಾರ ಮಾಡಿ, ಮಾತನಾಡಿದ ಪ್ರೊ.ಹೂವಯ್ಯಗೌಡ, ಕೆಂಪೇಗೌಡರು ಸಾಮಂತ ರಾಜರಾಗಿದ್ದರೂ ಕೂಡ ನಾಡಪ್ರಭು ಮತ್ತು ಧರ್ಮಪ್ರಭು ಕೂಡ ಆಗಿದ್ದರು. ಶ್ರೇಷ್ಠ ಪರಿಸರ ತಜ್ಞರು, ದೂರದರ್ಶಿತ್ವದ ವ್ಯಕ್ತಿತ್ವವುಳ್ಳವರು ಆಗಿದ್ದರಿಂದ ಬೆಂಗಳೂರು ಇಷ್ಟು ದೊಡ್ಡ ನಗರವಾಗಿ ಬೆಳೆದಿದೆ ಎಂದರು.

ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಒಂದೇ ಧರ್ಮಕ್ಕೆ ಸೀಮಿತವಾಗದೆ ಸರ್ವಜನಾಂಗದ ನಾಯಕರಾಗಿದ್ದರು. ಅವರು ಆಗ ಮಾಡಿದ ಅಭಿವೃದ್ಧಿ ಕಾರ್ಯಗಳು ಈಗಲೂ ನಮ್ಮ ಕಣ್ಣಿಗೆ ಕಾಣುತ್ತಿವೆ. ಈಗಿನ ಜನಪ್ರತಿನಿಧಿಗಳು ಮಾಡಿದ ಅಭಿವೃದ್ಧಿಗಳು ನಾಲ್ಕೈದು ವರ್ಷದಲ್ಲೇ ಮರೆಯಾಗುತ್ತವೆ ಎಂದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಮಾತನಾಡಿ, ಸಾಮರಸ್ಯದ ಸುಂದರ ನಗರದ ನಿರ್ಮಾತ್ರರಾದ ಕೆಂಪೇಗೌಡರು ಎಲ್ಲಾ ಕಾಲಕ್ಕೂ, ಎಲ್ಲಾ ಜನಾಂಗಕ್ಕೂ ಆದರ್ಶಪ್ರಾಯರು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಧರ್ಮೇಶ್, ಅಖಿಲ ಕರ್ನಾಟಕ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಾ ಸುರೇಂದ್ರ, ಪ್ರಮುಖರಾದ ಕಡಿದಾಳ್ ಗೋಪಾಲ್, ರಾಮಕೃಷ್ಣ, ಯುವಘಟಕದ ಅಧ್ಯಕ್ಷರಾದ ರಘುರಾಜ್, ವಿಜಯಕುಮಾರ್, ಡಿ. ಮಂಜುನಾಥ್, ಶಂಕರ್, ಪ್ರತಿಮಾ ಡಾಕಪ್ಪಗೌಡ ಸೇರಿದಂತೆ ವಿವಿಧ ಒಕ್ಕಲಿಗ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.