ಶಿವಮೊಗ್ಗ : ದೇವನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಮುಖಂಡರನ್ನು ಬಂಧಿಸಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಸಂಯುಕ್ತ ಹೋರಾಟದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಂಡಿರುವುದನ್ನು ವಿರೋಧಿಸಿ, ದೇವನಹಳ್ಳಿಯಲ್ಲಿ ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಆದರೂ ಕೂಡ ವಿಪರೀತ ಪೊಲೀಸ್ ಬಲ ಬಳಸಿ ವೇದಿಕೆಯ ಮೇಲಿದ್ದ ಮುಖಂಡರನ್ನು ಹಾಗೂ ಪ್ರತಿಭಟನಾನಿರತ ಮಹಿಳೆಯರನ್ನು ಒಳಗೊಂಡಂತೆ ಅನಾಗರೀಕವಾಗಿ ಎಳೆದಾಡಿ, ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ, ಭೂಸ್ವಾಧೀನ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ ಅವರೇ ಈಗ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅನಗತ್ಯ ಬಲಪ್ರಯೋಗಮಾಡಿ, ಹೋರಾಟಗಾರರನ್ನು ಬಂಧಿಸಿದ ಡಿಸಿಪಿ ಸಜಿತ್ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಬಂಧಿಸಿರುವ ಎಲ್ಲಾ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಮತ್ತು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ನೀಡುವ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ, ರಾಜ್ಯ ಮಹಿಳಾ ಘಟಕದ ಭಾಗ್ಯ ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಪದಾಧಿಕಾರಿಗಳಾದ ಎಂ.ಮಂಜಪ್ಪ, ಎಂ.ಎಸ್ ತಿಮ್ಮಪ್ಪ, ಹುಲಿಮಟ್ಟಿ ಜಯಣ್ಣ, ಪಿ.ಶೇಖರಪ್ಪ, ಗುರುಶಾಂತ, ಎಂ.ಡಿ ನಾಗರಾಜ್, ಸಿ.ಚಂದ್ರಪ್ಪ, ಜ್ಞಾನೇಶ್, ಸಿ.ಬಿ. ಹನುಮಂತಪ್ಪ, ಸಿಐಟಿಯು ಜಿಲ್ಲಾ ಸಂಚಾಲಕರಾದ ಎಂ.ನಾರಾಯಣ, ಸಿಐಟಿಯು ಬಿಸಿ ಊಟದ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಹನುಮಮ್ಮ, ಶಿವಕುಮಾರ್, ಶೇಷಪ್ಪ, ಪರಮೇಶ್, ಪುಟ್ಟರಾಜು, ಹನುಮಂತಪ್ಪ ಮೊದಲಾದವರು ಹಾಜರಿದ್ದರು.