
ಕನ್ನಡ ಕವನ ಕವಿತೆಉ ಚಿತ್ರ ಬಳಸಿಕೊಳ್ಳಲಾಗಿದೆ
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 49
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ನಾವು ಬದುಕುತ್ತಿದ್ದೇವೆ ಸಮಾಜದ ಎಲ್ಲ ಸ್ತರಗಳಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದೇವೆ. ಒಬ್ಬೊಬ್ಬರು ಒಂದೊಂದು ಬಗೆಯ ಸಾಧಕ ಜೀವನವನ್ನು ತೆರೆದಿಟ್ಟಿದ್ದಾರೆ. ಬದುಕಿಗಾಗಿ ಪರದಾಟ ಪಡುವವರು ಇದ್ದಾರೆ, ಹಾಗೆಯೇ ಈ ಬದುಕಿಗಾಗಿ ನಿತ್ಯ ನಿರಂತರ ಶ್ರಮದ ಕಾಯಕದೊಳಗೆ ಮಗ್ನರಾದವರು ಇದ್ದಾರೆ. ಬದುಕು ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿದ್ದರೆ, ಪರಸ್ಪರ ಹೊಂದಾಣಿಕೆ ನಂಬಿಕೆ ವಿಶ್ವಾಸ ನಮ್ಮೊಳಗೆ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆಯಲ್ಲವೇ?
ನಾವು ಸಹಬಾಳ್ವೆಯ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಹೊಂದಿಕೊಂಡಿದ್ದೇವೆ. ಆದರೆ ಎಷ್ಟು ಅಂತರಾಳವನ್ನು ಪರಸ್ಪರ ಅರಿತಿದ್ದೇವೆ ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಜೀವನದಲ್ಲಿ ಕಷ್ಟ ಮಾಮೂಲಿ ಎಂಬುವುದಾದರೆ ಸುಖವೂ ಸಹ ಮಾಮೂಲಿ ಆಗಲೇಬೇಕು. ಬರಿ ಸುಖ ಯಾವಾಗಲೂ ಅದರ ಖುಷಿ ನೀಡಲಾಗದು. ಕಷ್ಟ ಅನುಭವಿಸಿದವನಿಗೆ ಮಾತ್ರ ಸುಖದ ಅನುಭವ ಹಾಗೂ ಅರಿವು ಆಗುತ್ತದೆ. ಆದರೆ ಕಷ್ಟವೇ ಇಲ್ಲದವನಿಗೆ ಸುಖದ ಯಾವ ಭಾವ ತಾನೆ ಅರ್ಥವಾಗಲು ಸಾಧ್ಯ? ಅದಕ್ಕೆ ಹೇಳುವುದು ಬದುಕಲ್ಲಿ ಸಿಹಿಕಹಿ ಸಮಾನವಾಗಿರಬೇಕು ಹಾಗಾಗಿಯೇ ನಾವು ನಮ್ಮ ಸಂಪ್ರದಾಯದಂತೆ ಆಚರಿಸುವ ಯುಗಾದಿ ಹಬ್ಬದ ದಿನ ಬೇವಿನ ಜೊತೆ ಬೆಲ್ಲವನ್ನು ಹಂಚಿಕೊಂಡು ತಿನ್ನುತ್ತೇವೆ. ಏಕೆಂದರೆ ನಿಮ್ಮ ಸಿಹಿಕಹಿಗಳಲ್ಲಿ ಕಷ್ಟ ಸುಖಗಳಲ್ಲಿ ನಾವು ಜೊತೆಗಿರುತ್ತೇವೆ. ನಮ್ಮ ಸಿಹಿಕಹಿಗಳಲ್ಲಿ ನೀವು ನಮ್ಮೊಂದಿಗಿರಿ ಎಂಬುದು ಇದರ ತಾತ್ಪರ್ಯ ಅಲ್ಲವೇ?

ಒಂದು ವಿಷಯವನ್ನು ಗಂಭೀರವಾಗಿ ಗಮನಿಸುವುದಾದರೆ ನಾವು ಎಷ್ಟು ಕಾಲ ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಪರಸ್ಪರ ಅಂತರಾಳವನ್ನು ಅರಿತಿರುವುದು ಅತಿ ಮುಖ್ಯ. ಈ ವಿಷಯದಲ್ಲಿ ಎಲ್ಲಾ ಮನುಷ್ಯರು ಮನುಷ್ಯ ಸಹಜವಾಗಿ ಅಮಾಯಕರೇ ಹೌದು. ಪರಸ್ಪರ ಅಂತರಾತ್ಮವನ್ನು ಅರಿತುಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಸಂಪೂರ್ಣವಾಗಿ ಒಬ್ಬರು ಇನ್ನೊಬ್ಬರನ್ನು ಅಂತರಾಳದಲ್ಲಿ ಅರಿತು ಬದುಕುವುದು ಕಷ್ಟವಾದರೂ ಬಹಳಷ್ಟು ಮಟ್ಟಿಗೆ ಹೊಂದಾಣಿಕೆ ಬದುಕಲ್ಲಿ ಇಂತಹ ಅರಿವುಗಳು ನಮ್ಮ ನಡುವೆ ಹೆಚ್ಚಿನ ಪ್ರಮಾಣದಲ್ಲಿರುವುದು ಸಮಾಜದ ಚೌಕಟ್ಟಿನಲ್ಲಿ ಮಹತ್ವ ಎನಿಸುತ್ತದೆ.








ಮದುವೆಯಾಗಿ 50 ವರ್ಷವಾಯಿತು ಎನ್ನುವ ಅದೆಷ್ಟೋ ಜನರು ಪರಸ್ಪರ ಒಬ್ಬರನ್ನು ಒಬ್ಬರು ಸಂಪೂರ್ಣವಾಗಿ ಅರಿತುಕೊಳ್ಳುವಲ್ಲಿ ಸೋತಿರುತ್ತಾರೆ, ಸೋಲುತ್ತಿರುತ್ತಾರೆ. ಪರಸ್ಪರ ಅರಿವುಗಳು ಅಷ್ಟು ಸುಲಭವಾಗಿ ಕೈಗೆಟುವಂತೆ ಸಿಗುವ ಯಾವುದೇ ವಸ್ತು ಅಲ್ಲ. ಅದು ಮನುಷ್ಯನ ಮನದೊಳಗೆ ಆತನ ಅಂತರಾಳದೊಳಗೆ ಇರುವಂತಹ ಗಂಭೀರ ಚಿಂತನೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ,
ಗಂಡ ಹೆಂಡಿರ ನಡುವೆ ಎಷ್ಟು ಹೊಂದಾಣಿಕೆ ಇರುತ್ತದೆಯೋ ಅಷ್ಟೇ ಕಿರಿಕಿರಿಗಳು ಇರುತ್ತವೆ. ಇದನ್ನು ನಾವು ಸಮಾನವಾಗಿ ನೋಡುವುದಾದರೆ ಸಿಹಿ ಕಹಿ ಎಂಬುದಾಗಿ ಅವಲೋಕಿಸಬಹುದಲ್ಲವೇ? ಅಂತರಾಳದ ಅರಿವು ಪರಸ್ಪರ ಇದ್ದರೆ ಎಲ್ಲವೂ ಸಸೂತ್ರ ಎನ್ನಬಹುದು. ಆದರೆ ಅದರಲ್ಲೊಂದು ಚಿಕ್ಕ ಪ್ರಶ್ನೆ ಬಂದರೆ ಸಂಪೂರ್ಣ ಅಂತರಾಳವನ್ನು ಅರಿತಿಲ್ಲ ಎನ್ನುವುದಲ್ಲ ಆ ಅರಿವಿಗೆ ಒಂದಿಷ್ಟು ಚರ್ಚೆಗಳು ಮಾತುಕತೆಗಳು ಪರಸ್ಪರ ಹೊಂದಾಣಿಕೆ ಅತ್ಯಗತ್ಯವಲ್ಲವೇ, ಅದೇ ನಮ್ಮ ಈಗಿನ ಬದುಕು ಎಂದರೆ ತಪ್ಪಾಗಲಿಕ್ಕಿಲ್ಲ.

ಇಂತಹ ಪದಪುಂಜವನ್ನು ಹಿಡಿದು ನೋಡಿದಾಗ ಸಾಕಷ್ಟು ಸಾಹಿತ್ಯ ಈ ವಿಷಯದಲ್ಲಿ ವ್ಯಕ್ತವಾಗಿದೆ. ಅದರಲ್ಲಿ ಅತ್ಯಂತ ವಿಶೇಷವೆನಿಸಿದ ಒಂದು ಅಪರೂಪದ ವಿಶೇಷ ಕವನವನ್ನು ಓದಿ. ನಾಡಿನ ಹಿರಿಯ ಸಾಹಿತಿ ವೆಂಕಟೇಶ್ ಮೂರ್ತಿ ಅವರ ರಚನೆಯ ಈ ಕವನ ಓದಿ, ನಮ್ಮೊಳಗಿನ ನಮ್ಮಲ್ಲಿನ ಪ್ರಶ್ನೆಗಳು ಕಾಡುತ್ತವೆ.
ಇಷ್ಟು ಕಾಲ
ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು
ನಾವು ನಮ್ಮ
ಅಂತರಾಳವ
ಇಷ್ಟು ಕಾಲ
ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು
ನಾವು ನಮ್ಮ
ಅಂತರಾಳವ,
ಕಡಲ ಮೇಲೆ
ಸಾವಿರಾರು
ಮೈಲಿ ಸಾಗಿಯೂ
ಕಡಲ ಮೇಲೆ
ಸಾವಿರಾರು
ಮೈಲಿ ಸಾಗಿಯೂ
ನೀರಿನಾಳ
ತಿಳಿಯಿತೇನು
ಹಾಯಿ ದೊಣಿಗೆ
ನೀರಿನಾಳ
ತಿಳಿಯಿತೇನು
ಹಾಯಿ ದೊಣಿಗೆ
ಇಷ್ಟು ಕಾಲ
ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು
ನಾವು ನಮ್ಮ
ಅಂತರಾಳವ
ಅಂತರಾಳವ,
ಸದಾ ಕಾಲ
ತಬ್ಬುವಂತೆ
ಮೇಲೆ ಬಾಗಿಯೂ
ಸದಾ ಕಾಲ
ತಬ್ಬುವಂತೆ
ಮೇಲೆ ಬಾಗಿಯೂ
ಮಣ್ಣ ಮುತ್ತು
ದೊರಕಿತೇನು
ನೀಲಿ ಬಾನಿಗೆ
ಮಣ್ಣ ಮುತ್ತು
ದೊರಕಿತೇನು
ನೀಲಿ ಬಾನಿಗೆ
ಇಷ್ಟು ಕಾಲ
ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು
ನಾವು ನಮ್ಮ
ಅಂತರಾಳವ,
ಸಾವಿರಾರು
ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ
ಉಳಿಯಿತೆ
ಕನ್ನಡಿಯ ಪಾಲಿಗೆ
ಸಾವಿರಾರು
ಮುಖದ ಚೆಲುವ
ಹಿಡಿದು ತೋರಿಯೂ
ಒಂದಾದರೂ ಉಳಿಯಿತೆ
ಕನ್ನಡಿಯ ಪಾಲಿಗೆ
ಇಷ್ಟು ಕಾಲ
ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು
ನಾವು ನಮ್ಮ
ಅಂತರಾಳವ
ಇಷ್ಟು ಕಾಲ
ಒಟ್ಟಿಗಿದ್ದು
ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ
ಅಂತರಾಳವ
ಮನುಷ್ಯನ ಅಂತರಾಳವನ್ನು ಮಾತ್ರ ಚಿಂತಿಸದೆ ಅವರು ಬದುಕು ಪ್ರಕೃತಿ ಭಾವನೆ ಹಾಗೂ ನಮ್ಮ ನಡುವಿನ ಸಮಾಜದ ಎಲ್ಲ ಸ್ಥಳಗಳನ್ನು ಈ ಕವನದಲ್ಲಿ ಬಿಚ್ಚಿಟ್ಟಿದ್ದಾರೆ ಎಲ್ಲರ ಅಂತರಾಳವು ಪರಸ್ಪರ ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅತ್ಯಗತ್ಯ ಹಾಗೂ ಅನಿವಾರ್ಯ ಎಂದರೆ ತಪ್ಪಾಗಲಿಕ್ಕಿಲ್ಲ.