ಶಿವಮೊಗ್ಗ : ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿಕೆ ನೀಡಿ, ಕನ್ನಡಿಗರಿಗೆ ನೋವುಂಟುಮಾಡಿರುವ ನಟ ಕಮಲ್ಹಾಸನ್ ವಿರುದ್ಧ ವೇದಿಕೆ ನೀಡಿರುವ ದೂರನ್ನು ದಾಖಲಿಸಿಕೊಂಡು, ಕೂಡಲೇ ಆತನನ್ನು ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾವೇದಿಕೆ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದೆ.

ಒಬ್ಬ ಇತಿಹಾಸಕಾರನೂ ಅಲ್ಲದ, ಭಾಷಾ ತಜ್ಞನೂ ಅಲ್ಲದ ಈ ನಟ ನಮ್ಮ ಭಾಷೆ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ. ಆದಾಗ್ಯೂ ಈ ಪಾಪಕೃತ್ಯದ ಬಗ್ಗೆ ಅರಿತು ಕ್ಷಮೆಗೆ ಆಗ್ರಹಿಸಿದರೂ ಕ್ಷಮೆಯಾಚನೆಗೆ ತನ್ನ ಉದ್ಧಟತನ ಪ್ರದರ್ಶಿಸಿ, ತನ್ನ ಹೇಳಿಕೆ ಸಮರ್ಥಿಸಿಕೊಳ್ಳುತ್ತಿರುವುದು ಪಾಪಕೃತ್ಯದ ಪುನರಾವರ್ತನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ನೆಲ, ಜಲ, ಭಾಷೆ, ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಈ ವಿಷಯ ಭಾವನಾತ್ಮಕವಾಗಿದ್ದು, ಯಾರೂ ಈ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಆದರೆ ಈ ನಟ ತನ್ನ ಆರ್ಥಿಕ ಮತ್ತು ರಾಜಕೀಯ ಲಾಭಕ್ಕಾಗಿ ಸಂವಿಧಾನ ಆಶಯವಾದ ಭ್ರಾತೃತ್ವ ಭಾವನೆಗೆ ಧಕ್ಕೆವುಂಟುಮಾಡಿ, ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾನೆ. ನಮ್ಮ ಸಂವಿಧಾನ ವಿರೋಧಿ ಕೆಲಸ ಮಾಡಿದ ಈತನ ವಿರುದ್ಧ ದೂರು ದಾಖಲಿಸಿಕೊಂಡು ಕೂಡಲೇ ಬಂಧಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಎಸ್. ಕೋಟ್ಯಾನ್, ಜಿಲ್ಲಾ ಗೌರವಾಧ್ಯಕ್ಷ ನಿಂಬೆಹಣ್ಣು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎನ್. ರಂಗನಾಥ್, ಲಿಂಗರಾಜ್, ಹರೀಶ್, ಮಂಜುಳಾ ಎನ್. ಶಂಕರ್ ಜಗನ್ನಾಥ್, ಸಂತೋಷ್, ಎಂ.ಆರ್. ವೆಂಕಟೇಶ್ ಹೆಗಡೆ ಇನ್ನಿತರರು ಹಾಜರಿದ್ದರು.