
ಶಿವಮೊಗ್ಗ: ರಕ್ತ ಚೆಲ್ಲಿಯಾದರೂ ಡಿಸಿ ಕಚೇರಿ ಎದುರು ಇರುವ ಆಟದ ಮೈದಾನದ ಜಾಗವನ್ನು ಉಳಿಸಿಕೊಳ್ಳುತ್ತೇವೆ. ಇದಕ್ಕಾಗಿ ನ್ಯಾಯಬದ್ಧ ಹೋರಾಟ ಆರಂಭವಾಗಿದೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅಬ್ಬರಿಸಿದರು.

ಈದ್ಗಾ ಮೈದಾನವೆಂದು ಈ ಜಾಗವನ್ನು ಯಾರೂ ಕರೆಯಬಾರದು. ಇದು ವಕ್ಫ್ ಮಂಡಳಿಗೆ ಸೇರಿದೆ ಎಂಬುದಕ್ಕೆ ಯಾವ ದಾಖಲೆಗಳೂ ಇಲ್ಲ. ಅದರ ಬದಲು ಇದು ಸೂಡಾಕ್ಕೆ ಸೇರಿದ ಜಾಗವಾಗಿದೆ. ಇಲ್ಲಿ ಆಟದ ಮೈದಾನ ಅಥವಾ ಪಾರ್ಕ್ ನಿರ್ಮಿಸಬಹುದೇ ಹೊರತು ನಮಾಜ್ ಮಾಡುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಇದೆ ಎಂದು ಹೆಳಲಾಗುತ್ತಿದೆ. ಆದರೆ ಇದಕ್ಕೆ ಯಾವ ಅಪ್ಪ ಅಮ್ಮನೂ ಇಲ್ಲ. ವಿಳಾಸವೂ ಇಲ್ಲ. ಅಜರ್ ಮೊಹಲ್ ಎಂದಿದೆ. ಅದು ಎಲ್ಲಿದೆಯೋ ಗೊತ್ತಿಲ್ಲ. ಅದಕ್ಕೂ ಈ ಆಟದ ಮೈದಾನಕ್ಕೂ ಸಂಬಂಧವೇ ಇಲ್ಲ ಎಂದರು.

ಜಿಲ್ಲಾ ರಕ್ಷಣಾಧಿಕಾರಿಗಳ ವಿರುದ್ಧ ಕಿಡಿ ಕಾರಿದ ಈಶ್ವರಪ್ಪ, ನನ್ನ ಮೇಲೆ ಯಾವುದೇ ಆಧಾರಗಳಿಲ್ಲದಿದ್ದರೂ ಸತ್ಯ ಮಾತಾಡಿದ್ದರೂ ಸುಮೊಟೊ ಪ್ರಕರಣ ದಾಖಲಿಸಿಕೊಂಡ್ರಿ. ಈಗ ಈ ಜಾಗದಲ್ಲಿ ಬೇಲಿ ಹಾಕಲು ಬಿಟ್ಟಿದ್ದೀರಾ. ನೀವು ಐಪಿಎಸ್.ಓದಿರಬಹುದು. ಕಾಂಗ್ರೆಸ್ ಚೇಲಾಗಳಂತೆ ವರ್ತಿಸಬೇಡಿ. ನ್ಯಾಯದ ಪರ ಮಾತಾಡಿ. ನಾವು ದನ ಕಾಯಲು ಬಂದಿಲ್ಲ. ಜಿಲ್ಲಾಧಿಕಾರಿಗಳಾಗಲೀ, ಜಿಲ್ಲಾ ರಕ್ಷಣಾಧಿಕಾರಿಗಳೇ ಆಗಲಿ ನ್ಯಾಯಯುತ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಡಿ.ಸಿ.ಎದುರಿನಲ್ಲಿಯೇ ಎಸ್.ಪಿ., ಮಿಥುನ್ ಕುಮಾರ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ರಾಷ್ಟ್ರ ಭಕ್ತ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್, ಶ್ರೀಕಾಂತ್ ಮುಂತಾದವರು ಮಾತನಾಡಿ, ನಮ್ಮ ರಕ್ತ ಕುದಿಯುತ್ತಿದೆ. ರಕ್ತ ಕೊಟ್ಟೇವು. ಈ ಜಾಗ ಬಿಡುವುದಿಲ್ಲ. ಇದು ಹಿಂದೂಗಳ ಜಾಗ. ಕದ್ದು ಮುಚ್ಚಿ ರಾತ್ರೋ ರಾತ್ರಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಸಮಯದಲ್ಲಿ ಕೆಲವೇ ಅಧಿಕಾರಿಗಳು ಈ ಜಾಗವನ್ನು ವಕ್ಫ್ ಆಸ್ತಿಯೆಂದು ಬರೆದಿದ್ದಾರೆ. ಆದರೆ ಇದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಆ ಸಮಯದಲ್ಲಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೆಕು. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಮಹಾನಗರ ಪಾಲಿಕೆ ಅಯಕ್ತರು ಜವಾಬ್ದಾರಿಯಿಂದ ವರ್ತಿಸಿ, ಸೂಕ್ತವಾದ ಮೂಲ ದಾಖಲೆಗಳನ್ನು ಪರಿಶೀಲಿಸಿ ಮಹಾನಗರ ಪಾಲಿಕೆಗೆ ಸೇರಬೇಕಾದ ಈ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.