
ಶಿವಮೊಗ್ಗ : ಫೆ.೨೫ ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾ ಪುರ ಆಶ್ರಯ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಂಚಲಿದ್ದಾರೆ ಎಂದು ವಿಧಾನ ಪರಿಷತ್ ಶಾಸಕಿ ಬಲ್ಕಿಷ್ ಬಾನು ತಿಳಿಸಿದರು.
ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧.೦೦ ಗಂಟೆಗೆ ಗೋವಿಂದಾ ಪುರದಲ್ಲಿ ಎರಡನೇ ಹಂತದ ೬೨೫ ಆಶ್ರಯ ಮನೆಗಳನ್ನು ಫಲಾನುಭವಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಮನೆಯ ಕೀ ಯನ್ನು ಹಸ್ತಾಂತರಿಸಲಾಗುತ್ತದೆ ಎಂದರು.
ಆಶ್ರಯ ಸಮಿತಿ ತೀರ್ಮಾನದಂತೆ ತಾತ್ಕಾಲಿಕವಾಗಿ ನೀರಿನ ಸೌಲಭ್ಯ, ವಿದ್ಯುತ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಆಗಮಿಸಲಿದ್ದಾರೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಪಾಲ್ಗೊಳ್ಳಲಿದ್ದಾರೆ ಎಂದರು.
ಮಾ.೦೩ ರಂದು ಅದ್ದೂರಿಯಾಗಿ ಹಂಚುವ ಯೋಜನೆ ಇತ್ತು ಆದರೆ ಫಲಾನುಭವಿಗಳ ಒತ್ತಡದ ಮೇರೆಗೆ ಫೆ.೨೫ ರಂದು ಲಾಟರಿ ಮೂಲಕ ೬೨೫ ಮನೆಗಳನ್ನು ಹಂಚಲು ಬಹಳ ಸಂತೋಷವಾಗುತ್ತಿದೆ. ೨೦೧೭ ರಂದು ನಮ್ಮ ಸರ್ಕಾರದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಇದು ನಮ್ಮ ಸರ್ಕಾರದ ಹೋರಾಟದ ಫಲ ಎಂದು ಹೇಳಬಹುದು.
ಆ ವೇಳೆ ಇನ್ನಷ್ಟು ಮನೆಗಳನ್ನು ಹಂಚಬೇಕೆಂಬ ಬೇಡಿಕೆಯನ್ನು ಇದೆ. ಸಚಿವರು ಇನ್ನಷ್ಟು ಮನೆಗಳನ್ನು ಹಂಚುತ್ತಾರೆಂಬ ನಂಬಿಕೆ ಇದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಫೆ.೨೫ ರ ಮಂಗಳವಾರದಂದು ವಸತಿ ಸಚಿವ ಜಮೀರ್ ಅಹಮ್ಮದ್ ಅವರು ಶಿವಮೊಗ್ಗ ಆಗಮಿಸಲಿದ್ದಾರೆ. ಆಶ್ರಯ ಮನೆಗಳ ಇನ್ನುಳಿದ ವ್ಯವಸ್ಥೆಯನ್ನು ವೇಗವಾಗಿ ಮಾಡಲಾಗುವುದು. ಇದಕ್ಕೆ ಬೇಕಾದ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡುವ ಕೆಲಸ ಆಗಲಿ, ಗೋಪಿಶೆಟ್ಟಿಕೊಪ್ಪದಲ್ಲಿ ಮನೆ ನಿರ್ಮಾಣವಾಗಬೇಕು. ಮನೆ ಮಾತ್ರವಲ್ಲದೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯ ಮಾಡಿದರು.

೩೦೦೦ ಮನೆಗಳನ್ನು ಕಟ್ಟಬೇಕು ಎಂದು ಇತ್ತು. ಸುಮಾರು ೬೦೦ ಮನೆ ಹಿಂದೆ ನೀಡಲಾಗಿತ್ತು, ಈಗ ೬೨೫ ಮನೆ ನೀಡಲಾಗುತ್ತಿದೆ. ಜನರಿಗೆ ಬೇಕಾದ ಅಗತ್ಯ ಸೌಲಭ್ಯಗಳಾದ ಬಸ್ಸಿನ ಸೌಲಭ್ಯ, ಆಸ್ಪತ್ರೆ ಸೌಲಭ್ಯ, ಶಾಲೆಯ ಸೌಲಭ್ಯ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದರು.
ಸಮಿತಿ ವತಿಯಿಂದ ಹೋಗಿ ಸ್ಥಳದ ಪರಿಸ್ಥಿತಿಯ ತನಿಖೆ ಮಾಡಲಾಗಿದೆ. ಆಗುವ ಕೆಲಸವನ್ನು ವೇಗವಾಗಿ ಮಾಡಲು ಕಾರ್ಪೋರೇಶನ್ ಗೆ ತಿಳಿಸಲಾಗಿದೆ. ಶಾಸಕರೂ ಸಹ ೨-೩ ಬಾರಿ ಸದನದಲ್ಲಿ ಚರ್ಚಿಸಿ ವೇಗವಾಗಿ ಆಗುವಂತೆ ಮಾಡಿದ್ದಾರೆ. ಅವರು ಕಂಡ ಕನಸು ನನಸು ಆಗುವ ಸಂದರ್ಭ ಇದಾಗಿದ್ದು, ಹಬ್ಬದ ರೀತಿ ಆಚರಿಸಲಾಗುವುದು ಎಂದರು.
ಗುತ್ತಿಗೆ ದಾರರು ಬೇಗ ಮನೆಯನ್ನು ಪೂರ್ಣ ಗೊಳಿಸಿಕೊಡಬೇಕೆಂಬುದು ನಮ್ಮ ಕೋರಿಕೆ. ೨೦೧೩ ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೩೦೦೦ ಮನೆಗಳನ್ನು ಕಟ್ಟಲು ಆದೇಶಿಸಿದ್ದರು. ಆದರೆ ಮಧ್ಯದಲ್ಲಿ ಬಂದ ಸರ್ಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ವಹಿಸಲಿಲ್ಲ. ಬರಿ ಮನೆ ಕೊಡುವುದಷ್ಟೇ ಅಲ್ಲದೆ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಕೋರಿದ್ದೇವೆ.
ಕುಟುಂಬದೊಂದಿಗೆ ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕು. ಫಲಾನುಭವಿಗಳಿಗೆ ಅಂದು ಕಾರ್ಯಕ್ರಮಕ್ಕೆ ಆಗಮಿಸಲು ಕಾರ್ಪೋರೇಶನ್ ವತಿಯಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೀಗದ ಕೀಯೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಂದು ನೀಡಲಾಗುವುದು.
ನೀರಿನ ವ್ಯವಸ್ಥೆಯನ್ನು ಈಗ ತಾತ್ಕಾಲಿಕವಾಗಿ ಮಾಡಿದ್ದೇವೆ. ಜೂನ್ ತಿಂಗಳಲ್ಲಿ ಅದರ ಕಾಮಗಾರಿಯನ್ನು ಪೂರ್ಣ ಗೊಳಿಸುತ್ತೇವೆ ಎಂದರು.
ಹೆಚ್.ಸಿ.ಯೋಗೀಶ್ ಮಾತನಾಡಿ, ಮನೆಕಟ್ಟಿ ನೋದು ಮದುವೆ ಮಾಡಿ ನೋಡು ಎನ್ನುವಂತೆ ಜಿ+೨೦ ಮಾದರಿಯಲ್ಲಿ ಮಾಡಲಾಗಿದೆ. ಬೊಮ್ಮನ ಕಟ್ಟೆಯಲ್ಲಿ ಸಹ ನಮ್ಮ ಸರ್ಕಾರದಿಂದ ಮನೆಗಳನ್ನು ನೀಡಿದ್ದೇವೆ. ಮತ್ತೊಮ್ಮೆ ಸಿದ್ದರಾಮಯ್ಯರವರು ಅಧಿಕಾರಕ್ಕೆ ಬಂದಾಗ ಮನೆಯನ್ನು ನೀಡುತ್ತಿದ್ದಾರೆ. ಫಲಾನುಭವಿಗಳಿಗೆ ಮನೆಯನ್ನು ಕೊಡುವ ಸುವರ್ಣ ಅವಕಾಶ ನಮಗೆ ದೊರೆತಿದೆ ಎಂದರು.
ಫಲಾನುಭವಿಗಳಿಗೆ ಮಹಾನಗರ ಪಾಲಿಕೆಯಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದೇವೆ. ಮನೆಗಳ ಸಂಖ್ಯೆಯನ್ನು ಲಾಟರಿ ಮುಖಾಂತರ ಎತ್ತುವ ಉದ್ದೇಶವಿದೆ. ಫಲಾನುಭವಿಗಳ ನಡುವೆ ಫಸ್ಟ್ ಫ್ಲೋರ್ ೨ ಫ್ಲೋರ್ ಮನೆ ಬೇಕೆಂಬ ಗೊಂದಲ ಸೃಷ್ಟಿಯಾಗಬಾರದೆಂದು ಲಾಟರಿ ಮೂಲಕ ಎತ್ತುವ ಉದ್ದೇಶ ಇದೆ ಎಂದರು.
೩ ಕಿಮೀ ಕಾಮಗಾರಿ ಮುಗಿದ ನಂತರ ನೀರಿನ ವ್ಯವಸ್ಥೆ ಆಗುತ್ತದೆ. ಫಲಾನುಭವಿಗಳು ಕುಟುಂಬ ಸಮೇತರಾಗಿ ಆಗಮಿಸಬೇಕು. ಊಟದ ವ್ಯವಸ್ಥೆಯನ್ನು ಕೂಡಾ ಕಾರ್ಪೋರೇಶನ್ ವತಿಯಿಂದ ಮಾಡಲಾಗಿದೆ. ಸರ್ಕಾರಿ ಬಸ್ಸಿನ ವ್ಯವಸ್ಥೆಗೆ ಮನವಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲೀಮ್ ಪಾಷಾ, ಶಿವಕುಮಾರ್, ಲಕ್ಷ್ಮಣ್, ಮುಹಿ ಪಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.