![qqq](https://tungataranga.com/wp-content/uploads/2025/02/qqq-scaled.jpg)
ಶಿವಮೊಗ್ಗ, ಫೆ.11
ಜಿಲ್ಲೆಯಲ್ಲಿ ಎಲ್ಲೇ ಬಾಲ್ಯ ವಿವಾಹ ಪ್ರಕರಣ ನಡೆದರೂ ಅದನ್ನು ಹಾಟ್ಸ್ಪಾಟ್ ಎಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮುದಾಯವನ್ನೊಳಗೊಂಡ ಪರಿಣಾಮಕಾರಿ ಕ್ರಮ ಕೈಗೊಂಡು ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಪ್ರತಿ ಒಂದು ಬಾಲ್ಯ ವಿವಾಹ ಪ್ರಕರಣವನ್ನು ಹಾಟ್ಸ್ಪಾಟ್ ಎಂದು ಪರಿಗಣನೆಗೆ ತೆಗೆದುಕೊಂಡು ಚಟುವಟಿಕೆ ಕೈಗೊಳ್ಳಬೇಕು. ಶಾಶ್ವತ ಪರಿಹಾರ ಒದಗುವಂತಹ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಮುಖಂಡರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಸಹಾಯ ತೆಗೆದುಕೊಂಡು ಸಮುದಾಯದಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುವಂತಾಗಬೇಕು. ಬಾಲ್ಯ ವಿವಾಹ ತಡೆಯುವಲ್ಲಿ ಶ್ರಮಿಸಿದ ಮುಖಂಡರು, ಪ್ರೇರಕರನ್ನು ಗೌರವಿಸಬೇಕು. ಸ್ಥಳೀಯವಾಗಿ ಕಾರ್ಯವೆಸಗುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸದ್ಬಳಕೆ ಮಾಡಿಕೊಂಡು ಅವರನ್ನೂ ಗೌರವಿಸಬೇಕು.
![](http://tungataranga.com/wp-content/uploads/2025/02/Screenshot_2025_0208_211945.jpg)
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಬಾಲ್ಯ ವಿವಾಹ ತಡೆ ಕಾರ್ಯದೊಂದಿಗೆ ಸಮುದಾಯಗಳಲ್ಲಿ ಶಾಶ್ವತವಾಗಿ ಬಾಲ್ಯ ವಿವಾಹ ತಡೆಯುವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಹಾಗೂ ಪ್ರಾಥಮಿಕ ಹಂತದ ಶಾಲೆಗಳಿಂದ ಹಿಡಿದು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿ ದಿನ ಪೋಕ್ಸೋ ಮತ್ತು ಬಾಲ್ಯ ವಿವಾಹ ಜಾಗೃತಿ ಕುರಿತು ಪ್ರತಿಜ್ಞಾ ವಿಧಿ ಬೋಧನೆ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಕಾರ್ಯಾಗಾರ ಸೇರಿದಂತೆ ಉತ್ತಮ ಫಲಿತಾಂಶ ಬರುವಂತಹ, ಶಾಶ್ವತ ಪರಿಹಾರ ಒದಗುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾಡಳಿತದಿಂದ ಸಹ ಬಾಲ್ಯ ವಿವಾಹ ತಡೆಗೆ ಸಹಕರಿಸಿದ ಪ್ರೇರಕರು, ಮುಖಂಡರನ್ನು ಗೌರವಿಸಲಾಗುವುದು ಎಂದರು.
![](http://tungataranga.com/wp-content/uploads/2025/02/Screenshot_20250210_211426-461x1024.jpg)
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲೆಯಲ್ಲಿ 2024 ರ ಏಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ ಬಾಲ್ಯ ವಿವಾಹದ ಬಗ್ಗೆ ಒಟ್ಟು 89 ದೂರುಗಳನ್ನು ಸ್ವೀಕರಿಸಲಾಗಿದ್ದು ಒಟ್ಟು 26 ಬಾಲ್ಯ ವಿವಾಹ ತಡೆಯಲಾಗಿದೆ. 63 ಬಾಲ್ಯ ವಿವಾಹ ನಡೆದಿದೆ.
ಬಾಲ್ಯ ವಿವಾಹ ತಡೆಯಲು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ, ವಿಶೇಷ ಗ್ರಾಮ ಸಭೆಗಳಲ್ಲಿ ಜಾಗೃತಿ, ಗೋಡೆ ಬರಹ, ರಕಷಣೆ ನೀಡಿದ ಮಕ್ಕಳಿಗೆ ಕೌಶಲ್ಯ ತರಬೇತಿ, ರಕ್ಷಣಾ ಕ್ರಮಗಳು ಮತ್ತು ಸಹಕಾರ ಸಂಘಗಳಿAದ ಪೋಷಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಇತ್ತೀಚಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ ವೇಳೆ ಅಂಗನವಾಡಿಯೊAದರಲ್ಲಿ ಆರೋಗ್ಯ ತಪಾಸಣೆ ಆಗದಿರುವುದು ಕಂಡು ಬಂದಿದೆ. ಸಂಬAಧಿಸಿದ ಪಿಹೆಚ್ಸಿ ವೈದ್ಯರು ಮತ್ತು ಸಿಡಿಪಿಓ ಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಭಾಗದಲ್ಲಿ 145 ಸೇರಿದಂತೆ ಒಟ್ಟು 258 ನಿವೇಶನಗಳ ಅಗತ್ಯವಿದ್ದು, ಗ್ರಾಮೀಣ ಭಾಗದಲ್ಲಿ ಆದ್ಯತೆಯಲ್ಲಿ ತಹಶೀಲ್ದಾರರು ನಿವೇಶನ ಗುರುತಿಸಿ ಒದಗಿಸಲು ಸೂಚಿಸಿದರು.
ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಗೆ ಆರೋಗ್ಯ ಇಲಾಖೆಯಿಂದ ತಾಯಿ ಕಾರ್ಡ್ ಸರಬರಾಜಿನಲ್ಲಿ ಕೊರತೆಯಿದ್ದು, ಶೀಘ್ರವಾಗಿ ಪೂರೈಸಬೇಕು. ಹಾಗೂ ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಗೆ ಔಷಧಿ ಮತ್ತು ಮಾತ್ರೆಗಳನ್ನು ಬೇಡಿಕೆಯನ್ವಯ ಆರೋಗ್ಯ ಇಲಾಖೆಯಿಂದ ಸರಬರಾಜು ಮಾಡಲು ಕ್ರಮ ವಹಿಸುವಂತೆ ಡಿಹೆಚ್ಒ ರವರಿಗೆ ಸೂಚನೆ ನೀಡಿದರು.
ಜಿಲ್ಲೆಯ ಸ್ತಿçÃಶಕ್ತಿ ಭವನಗಳ ದುರಸ್ತಿ, ಮಳಿಗೆಗಳ ಮರು ಹಂಚಿಕೆ, ಒಕ್ಕೂಟಗಳ ಪುನರ್ ರಚನೆ ಕಾರ್ಯ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಲೈಂಗಿಕ ಕಾರ್ಯಕರ್ತರು/ ಲೈಂಗಿಕ ಶೋಷಣೆಗೊಳಗಾದವರ ಪುನರ್ವಸತಿಗಾಗಿ ಚೇತನ ಯೋಜನೆಯಡಿ ಪ್ರತಿ ಫಲಾನುಭವಿಗೆ ನೇರವಾಗಿ ರೂ. 30,000 ಪ್ರೋತ್ಸಾಹ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಈವರಗೆ ರೂ.3 ಲಕ್ಷ ಬಿಡುಗಡೆಯಾಗಿದೆ. ಇತರರಿಗೆ ರೂ. 1,50,000, ಎಸ್ಸಿ ರೂ. 90 ಸಾವಿರ, ಎಸ್ಟಿ ರೂ. 60 ಸಾವಿರ, ಪ್ರೋತ್ಸಾಹ ಧನ ನೀಡಲಾಗಿದೆ. 2024-25 ನೇ ಸಾಲಿನ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 87 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ ಸಂರಕ್ಷಣಾಧಿಕಾರಿಗಳ ಬಳಿ 40 ಹಾಗೂ ನ್ಯಾಯಾಲಯದಲ್ಲಿ 47 ಪ್ರಕರಣಗಳು ಬಾಕಿ ಇವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ ಮಾತನಾಡಿ, ರಾಜ್ಯ ಮಹಿಳಾ ನಿಲಯದಲ್ಲಿ 81 ಮಾನಸಿಕ ಅಸ್ವಸ್ಥರು ನಿವಾಸಿಯಾಗಿರುತ್ತಾರೆ. ಪ್ರಸ್ತತು ಸಂಸ್ಥೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ನಿಲಯಕ್ಕೆ ಓರ್ವ ನರ್ಸ್ ನಿಯೋಜನೆ ಹಾಗೂ ಸಾಗರ ಸಖಿ ಒನ್ ಸ್ಟಾಪ್ ಸೆಂಟರ್ಗೆ ಖಾಯಂ ಪೊಲೀಸ್ ನಿಯೋಜನೆ ಮಾಡುವಂತೆ ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತಾ, ಡಿಹೆಚ್ಓ ಡಾ.ನಟರಾಜ್, ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ತಾಜುದ್ದೀನ್ ಖಾನ್, ತಾಲ್ಲೂಕುಗಳ ಸಿಡಿಪಿಓ, ಇತರೆ ಅಧಿಕಾರಿಗಳು ಹಾಜರಿದ್ದರು.