ಶಿವಮೊಗ್ಗ ಜ.21 :: ಇತ್ತೀಚೆಗೆ ನಡೆದ ಸಹಕಾರಿ ಕ್ಷೇತ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಬಹುಪಾಲು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜಯಶೀಲರಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಶಿವಮೊಗ್ಗದ ನಗರ ಜೆಡಿಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಗೆದ್ದವರು ಪಕ್ಷಕ್ಕಾಗಿ ಹೆಚ್ಚಿನ ಸಮಯ ಕೊಡಿ. ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿದ್ದಾರೆ. ನಮ್ಮನ್ನೆಲ್ಲ ನಾಚಿಸುವಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಬೇರು ಮಟ್ಟದಿಂದ ಪಕ್ಷ ಸಂಘಟಿಸಬೇಕೆಂದು ಕರೆ ನೀಡಿದ್ದಾರೆ. ಅದರಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಕೆಲಸ ಮಾಡಬೇಕು ಎಂದರು.
ನಿಮ್ಮ ಸ್ಥಾನಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ. ಷೇರುದಾರರಿಗೆ ಗೌರವ ಕೊಡಿ. ಎಲ್ಲರ ಪ್ರೀತಿ ಅಭಿಮಾನ ಗಳಿಸಿಕೊಳ್ಳಿ ಎಂದರು.
ಜೆಡಿಎಸ್ಗೆ ಜಿಲ್ಲೆಯಲ್ಲಿ ಭದ್ರವಾದ ನೆಲೆ ಇದೆ. ಮಹಾನಗರ ಪಾಲಿಕೆಗೆ ಎಲ್ಲಾ ವಾರ್ಡ್ಗಳಲ್ಲೂ ಸ್ಪರ್ಧೆಗೆ ಅನೇಕರು ಮುಂದೆ ಬಂದಿದ್ದಾರೆ. ಈಗಾಗಲೇ ಕಾರ್ಯಕರ್ತರ ಹುಮ್ಮಸ್ಸು ನೋಡಿ ಭರವಸೆ ಮೂಡಿದೆ ಎಂದರು.
ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಂಯಿತಿ, ತಾಲೂಕು ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನ ಗಳಿಸಿದರೆ ಮಾತ್ರ ಶಿವಮೊಗ್ಗ ನಗರ ಅಸೆಂಬ್ಲಿ ಸ್ಥಾನವನ್ನು ಮೈತ್ರಿ ಮುಂದುವರೆದರೆ ನಾವು ಕೇಳಲು ಹಕ್ಕಿದೆ. ಹಾಗಾಗಿ ಪಕ್ಷವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸಿ. ಈಗಿನಿಂದಲೇ ಕೆಲಸ ಪ್ರಾರಂಭ ಮಾಡಿ. ಪ್ರತಿ ಬೂತ್ಗಳಲ್ಲೂ ಓಡಾಡಿ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಅಲ್ಲಲ್ಲಿ ಒಂದು ಸಮಿತಿ ಮಾಡಿ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು.
ಗೆದ್ದ ಪ್ರಮುಖರಾದ ಎಸ್.ಟಿ. ಕೃಷ್ಣೇಗೌಡ, ಉಮಾಶಂಕರ ಉಪಾಧ್ಯ, ಕೆ.ಎನ್. ರಾಮಕೃಷ್ಣ, ನರಸಿಂಹ ಗಂಧದಮನೆ, ಮಹೇಶ್, ಕಾಂತರಾಜ್, ಮಾಧವಮೂರ್ತಿ, ರಮೇಶ್ ನಾಯ್ಕ್, ಅಬ್ದುಲ್ ವಾಜಿದ್, ವೀರೇಶ್ ಸೇರಿದಂತೆ 30ಕ್ಕೂ ಹೆಚ್ಚು ಗೆದ್ದವರನ್ನು ಸನ್ಮಾನಿಸಲಾಯಿತು.
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತ್ಯಾಗರಾಜ್, ಸಿದ್ದಪ್ಪ, ಸಂಗಯ್ಯ, ಮಂಜುನಾಥ್, ಸಂಜಯ್ ಕಶ್ಯಪ್, ದಯಾನಂದ್, ವಿನಯ್, ಗೋಪಿ ಮೊದಲಿಯಾರ್ ಮೊದಲಾದವರಿದ್ದರು.