ಶಿವಮೊಗ್ಗ,ಜ.13 : ರಾಷ್ಟ್ರೀಯ ರೈತ ಹೋರಾಟದ ಸಂಚಾಲಕ ಧಲೇವಾಲಾ ೪೩ ದಿನದ ಉಪವಾಸ ಸತ್ಯಾಗ್ರಹದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆಯ ಮೂಲಕ ಮಹಾವೀರ ವೃತ್ತದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ರ ಪ್ರತಿಕೃತಿ ದಹಿಸಿ ಬಳಿಕ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ದೆಹಲಿ ಗಡಿ ಕನೂರಿಯಲ್ಲಿ ಪಂಜಾಬ್ನ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೇತರ) ಸಂಘಟನೆಯ ರಾಷ್ಟ್ರೀಯ ಸಂಚಾಲಕ ರೈತ ಹೋರಾಟಗಾರ ಜಗಜಿತ್ ಸಿಂಗ್ ಧಲೇವಾಲಾ ೪೫ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ ವಹಿಸಿದೆ. ಈ ಕೂಡಲೇ ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಧಲೇವಾಲಾ ಪ್ರಾಣ ಉಳಿಸಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ಎಂ.ಎಸ್.ಪಿ. ಘೋಷಿಸಬೇಕು. ಕೃಷಿ ಕಾಯ್ದೆ ರದ್ದುಪಡಿಸಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರೂ.ಗಳನ್ನು ತಕ್ಷಣವೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಎನ್.ಕೆ.ಮಂಜುನಾಥಗೌಡ, ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ, ಜಿಲ್ಲಾಧ್ಯಕ್ಷ ಮಂಜುನಾಥ್ ಅರೇಕೊಪ್ಪ, ಸತೀಶ್, ಅಮೃತ್, ಹನುಮಂತ ನಾಯ್ಕ, ದಾನೇಶ್, ಷಪೀವುಲ್ಲಾ, ಈಶ್ವರಪ್ಪ ಕೊಡಕಣಿ ಕಿರಣ್ ಕುಮಾರ್ ಇದ್ದರು.