ಯುವನಾಯಕರನ್ನು ಸೃಷ್ಟಿಸುತ್ತಿರುವ ಜೆಸಿಐ ಭಾವನಾ
ಶಿವಮೊಗ್ಗ ಜ.13 :: ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಜತೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಜೆಸಿಐ ಸಂಸ್ಥೆ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೆಸಿಐ ಸಂಸ್ಥೆಯು ನಿರಂತರವಾಗಿ ಯುವಜನರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದು, ಯುವನಾಯಕರನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಜೆಸಿಐ ಸಂಸ್ಥೆಯಲ್ಲಿ ನಾನು ಕೂಡ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದು, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕಲಿತ ಶಿಸ್ತು, ಉತ್ತಮ ಸಂವಹನ ಕೌಶಲ್ಯ, ನಾಯಕತ್ವ ಗುಣಗಳನ್ನು ಕಲಿತಿದ್ದೇನೆ. ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಹೇಳಿದರು.
ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಜೆಸಿಐ ಸಂಸ್ಥೆಯ ಉದ್ದೇಶಗಳು ಎಲ್ಲ ಯುವಜನರನ್ನು ತಲುಪಬೇಕು. ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಸಂಸ್ಥೆ ನಡೆಸುವಂತಾಗಲಿ, ಅದಕ್ಕೆ ಅವಶ್ಯವಿರುವ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಜೆಸಿಐ ಭಾವನಾದ 2024ರ ಅಧ್ಯಕ್ಷೆ ಅನಿಶಾ ಕಾತರಕಿ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು. ಅನಿಶಾ ಕಾತರಕಿ ಅವರು ನ್ಯಾಷನಲ್ ಕೋಆರ್ಡಿನೇಟರ್ ಸಿಎಸ್ಆರ್ ಆಗಿ ನ್ಯಾಷನಲ್ ಗವರ್ನಿಂಗ್ ಬೋರ್ಡ್ಗೆ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಲಾಯಿತು. ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಉತ್ತಮ ಸೇವಾ ಕಾರ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ಎಲ್ಲರ ಪ್ರೋತ್ಸಾಹದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದು ಅನಿಶಾ ಕಾತರಕಿ ತಿಳಿಸಿದರು.
ಜೆಸಿಐ ಸಂಸ್ಥೆ ವಲಯ 24ರ ವಲಯಾಧ್ಯಕ್ಷ ಗೌರೀಶ್ ಭಾರ್ಗವ್.ಕೆ.ವಿ., ನಿಕಟಪೂರ್ವ ವಲಯಾಧ್ಯಕ್ಷ ಚನ್ನವೀರೇಶ್ ಹಾವಣಗಿ, ಜೆಸಿಐ ಶಿವಮೊಗ್ಗ ಭಾವನಾ ಸ್ಥಾಪಕ ಅಧ್ಯಕ್ಷೆ ಅಂಜಲಿ ಕಾತರಕಿ, ಪೂರ್ವಾಧ್ಯಕ್ಷೆ ಪುಷ್ಪಾ ಶೆಟ್ಟಿ, ಸುರೇಖಾ ಮುರಳೀಧರ್, ರತ್ನಲಕ್ಷ್ಮೀ ನಾರಾಯಣ, ಸುಗುಣಾ ಸತೀಶ್, ವಲಯ 24ರ ಎಲ್ಲ ಪೂರ್ವ ವಲಯಾಧ್ಯಕ್ಷರು, ರಾಷ್ಟ್ರೀಯ ಮತ್ತು ವಲಯಾಧಿಕಾರಿಗಳು, ಹಿರಿಯ ಜೆಸಿಗಳು ಮತ್ತಿತರರು ಉಪಸ್ಥಿತರಿದ್ದರು.