ಗಜೇಂದ್ರ ಸ್ವಾಮಿ ಎಸ್.ಕೆ.,ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ವಾರದ ಅಂಕಣ – 26
ವರುಷ ಉರುಳಿ ಹೊಸ ವರ್ಷ ಮತ್ತೆ ಬರುತ್ತಿದೆ 2024 ಕೊನೆಯ ಹಂತದ ದಿನಮಾನಗಳಲ್ಲಿ 2025ರ ಹೊಸತನ ಹಾಗೂ ಬದುಕಿನ ಬದಲಾವಣೆಗಳು ಎಲ್ಲರ ಮನದಲ್ಲಿ ಮೂಡಿರುತ್ತದೆ. ಹಾಗೆಯೇ ಹೊಸ ಹೊಸ ಯೋಚನೆಗಳು ಹೊಸ ಹೊಸ ಕನಸುಗಳು ಇರುತ್ತವೆ. ನಾಳೆ ಎಂಬುದೇ ಹೊಸ ಬದುಕು ಎಂದು ಯೋಚಿಸುವ ನಮ್ಮ ನಡುವಿನ ನಮ್ಮ ಈ ಸಮಾಜದಲ್ಲಿ ಕೈಗಡ ಸಾಲ ಪಡೆದವನಿಗೆ, ದಾಖಲೆ ರಹಿತವಾಗಿ ಏನನ್ನೂ ಪಡೆದವನಿಗೆ ಮತ್ತು ತನ್ನಲ್ಲಿರುವ ದುಶ್ಚಟಗಳಿಗೆ ಇತಿಶ್ರೀ ಹೇಳಬೇಕೆಂದುಕೊಂಡವನಿಗೆ “ನಾಳೆ” ಎಂಬುದೇ ಒಂದು ನಾಟಕ. ಅದೊಂದು ಆತನ ಪಾಲಿಗೆ ಮನಸಿಗೆ ಬೇಲಿ ಹಾಕಿಕೊಳ್ಳುವ ಪ್ರಯತ್ನ ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.
ಸದಾಕಾಲ ನಾನು ಹೀಗಿರಬೇಕು, ಹೀಗಾಗಬೇಕು. ಯಾರು ನನಗೆ ಏನನ್ನು ಕೇಳದಂತಿರಬೇಕು, ಯಾರಿಗೂ ಅನ್ಯಾಯ ಮಾಡಬಾರದು, ಯಾರಿಗೂ ಮೋಸ ಮಾಡಬಾರದು, ಯಾರಿಗೂ ವಂಚಿಸಬಾರದು, ಯಾರನ್ನೇ ಆಗಲಿ ಅವರನ್ನು ನಾನು ನೋಯಿಸಬಾರದು. ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ದಿನಾಂಕ ಅಥವಾ ಸುಸಮಯವನ್ನು ನಿಗದಿ ಮಾಡಿಕೊಂಡು ಮುಂದುವರಿಸುವ ಬಹಳಷ್ಟು ಮನಸುಗಳಿಗೆ ಅಂದಿನ ನಿರ್ಧರಿತ ಸಮಯವೇ ಒಂದು ರೀತಿ ವರ.
ಇದೇ ಮತ್ತೊಂದು ಬಗೆಯಲ್ಲಿ ತನ್ನನ್ನು ತಾನು ಇನ್ನಷ್ಟು ಹಾಳು ಮಾಡಿಕೊಳ್ಳುವ, ಇನ್ನಷ್ಟು ವಂಚಿಸಲು ಸೂಕ್ತ ವೇದಿಕೆಯಾಗುತ್ತದೆ ಅಷ್ಟೇ. ಅಂದಿದ್ದ ಮನಸ್ಸು ಆ ಕ್ಷಣ ಬಂದಾಗ ಬದಲಾಗುವುದು ನಮ್ಮ ನಡುವಿನ ವಾಸ್ತವವಲ್ಲವೇ? ಮನಸ್ಸು ಗಟ್ಟಿಯಾಗಿದ್ದರೆ, ಸ್ಥಿಮಿತತೆಯಲ್ಲಿದ್ದರೆ, ಹಿಡಿತದಲ್ಲಿದ್ದರೆ ಏನು ಬೇಕಾದರೂ ಬದಲಾವಣೆ ಸಾಧ್ಯ. ಆದರೆ ಅಂತಹ ಹಿಡಿತವನ್ನು ಕಾಯ್ದುಕೊಳ್ಳಲು ನಮ್ಮ ನಡುವಿನ ಸಮಾಜ, ನಮ್ಮೊಳಗಿನ ಬಾಂಧವ್ಯ ನಮ್ಮ ಬದುಕಿಗೆ ಹೊಂದಿಕೊಂಡ ಇನ್ನೊಂದು ಮನಸ್ಸು ಅದಕ್ಕೆ ಸಹಕರಿಸುವ ರೀತಿಗಳು ಅತ್ಯಂತ ಕಡಿಮೆ ಎಂದೇ ಹೇಳಬೇಕು.
ಪದೇ ಪದೇ ಯಾವುದನ್ನೇ ಆದರೂ ಅದನ್ನು ಕಾಡಿದರೆ ಕನವರಿಸಿದರೆ, ಪದೇ ಪದೇ ನಿಂದನೆಯ ಹಿಡಿ ಶಾಪಕ್ಕೆ ತುತ್ತಾದರೆ ಅದು ಹೇಗೆ ತಾನೇ ಬದಲಾಗಲು ಸಾಧ್ಯ? ಬದಲಾಗಬೇಕೆಂಬ ಮನಸ್ಸು ಮತ್ತೆ ಬದಲಾಗುವ ಕನಸನ್ನು ನಿಂದನೆಯನ್ನು ನೆನಪಿಸುತ್ತದೆ ಅಲ್ಲವೇ? ಕನವರಿಸುತ್ತದೆ ಅಲ್ಲವೇ?.
ಒಂದಂತೂ ಸತ್ಯ ನಮ್ಮ ನಮ್ಮ ಸಹಜ ಬದುಕಲ್ಲಿ ಬದಲಾವಣೆಗಳು, ವಾಸ್ತವಗಳ ಹತ್ತಿರ ಸುಳಿದಾಡುತ್ತವೆ. ಬದಲಾವಣೆಗೆ ಅವಕಾಶಗಳನ್ನು ಹುಡುಕುತ್ತವೆ. ಆದರೆ ಅಂತಹ ಅವಕಾಶಗಳು ನಮ್ಮ ನಡುವೆ ಬಹಳಷ್ಟು ಕಡೆ ದೊರಕದಿರುವುದು ಕಂಡು ಬರುತ್ತಿದೆ. ಏಕೆಂದರೆ ಸುಖಾ ಸುಮ್ಮನೆ ಮನಸ್ಸಿನ ಹಿಡಿತಗಳಿಗೆ ಛಡಿಯೇಟು ಕೊಡುವ ಪಕ್ಕದ ಮನಸುಗಳು ಮತ್ತೆ ಮತ್ತೆ ಒಂದು ಬಗೆಯಲಲ್ಲಿ ಸ್ಥಿಮಿತತೆಯನ್ನು ಕಳೆಯುತ್ತವೆ. ಮತ್ತೆ ಅದೇ ರಾಗ, ಬದಲಾವಣೆಗೆ ಅದಕ್ಕೆ ಮತ್ತೊಂದು ದಿನ, ಹುಣ್ಣಿಮೆ ಅಮವಾಸೆ ಜೊತೆ ಮತ್ತೊಂದು ಹಬ್ಬ. ಮತ್ತೊಂದು ಯೋಚನೆ ಅಲ್ಲಿಯವರೆಗೆ ಮನುಷ್ಯ ಸಹಜ ಚಟಗಳಿಂದ ದೂರವಿರುವುದು ಕಷ್ಟವಲ್ಲವೇ?
ಮನಸೆಂಬುದು ಒಂದು ಬಗೆಯ ಹಿಡಿತದಿಂದ ತಪ್ಪಿಸಿಕೊಂಡು ಓಡಿ ಹೋಗುವ ಚಂಚಲತೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಜ್ಣಾನ, ವಿದ್ಯೆ ಮೂಲಕ ಬೆಳೆದವರೂ ಇದರ ಹಿಡಿತ ಸಾಧಿಸುವುದು ಕಷ್ಟ., ಅಜೀವ ಬ್ರಹ್ಮಚರ್ಯದ ಮೂಲಕ ಗುರುಗಳಾದವರೂ ಕೆಲವೊಮ್ಮೆ ಹಿಡಿತ ತಪ್ಪುತ್ತಾರೆ. ಅಂದಾಗ ಮನಸು ಹೇಗಿರಬಹುದಲ್ಲವೇ?
ಏನೇನೋ ಕ್ಷಣಿಕ ಆಸೆಗಳಿಗೆ ದುರಾಸೆಯ ಮುಖ ಕಾಣಿಸಿಕೊಳ್ಳಲು ಮನಸೆಂಬ ಕುದುರೆಯೇ ಕಾರಣ!, ಮನಸೆಂಬ ಚಂಚಲೆಗೆ ನಮ್ಮೊಳಗೊಂದು ಭದ್ರ ಬೇಲಿ ಬೇಕಲ್ಲವೇ?
ಏನೇ ಆಗಲಿ ನಮ್ಮ ನಮ್ಮ ನಡುವೆ ಎಂತಹುದೇ ಇರಲಿ, ಸ್ವಸ್ಥ ಸುಂದರ ಸಮಾಜಕ್ಕೆ ನಮ್ಮದೊಂದು ಅಳಿಲು ಸೇವೆ ಇರಲಿ. ಹೊಸ ವರ್ಷ ಹೊಸ ದಿನ ಹೊಸ ಕ್ಷಣ ಎಲ್ಲರೂ ಹೊಸತನ್ನು ಮೂಡಿಸಲಿ.
(ಮುಂದುವರೆಯುತ್ತದೆ)