ಶಿವಮೊಗ್ಗ,ಡಿ26: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಂಧನದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಇಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು, ಸಿಐಡಿ ಗೆ ಸರ್ಕಾರ ವಹಿಸಿದ್ದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಆದಿಯಾಗಿ ರಾಜ್ಯದ ಹಲವು ನಾಯಕರು ರವಿಯವರ ಮೇಲಿನ ಕ್ರಮವನ್ನು ಖಂಡಿಸಿದ್ದಾರೆ. ಕಾಡು ಮೇಡು ಗುಡ್ಡಗಳಲ್ಲಿ ರವಿಯವರಿಗೆ ಸೆಕ್ಯೂರಿಟಿ ನೀಡಲು ಕರೆದುಕೊಂಡು ಹೋಗಿದ್ದೆವು ಎನ್ನುತ್ತಾರೆ. ಕಾಂಗ್ರೆಸ್ ಸರ್ಕಾರ ಅದೇ ರೀತಿಯ ಕಾನೂನು ತರಲಿ ಎಂದು ಆಗ್ರಹಿಸಿದರು.
ಸಿಐಡಿ ರಾಜ್ಯ ಸರ್ಕಾರದ ಕೈಯಲ್ಲಿದೆ. ಸ್ವತಃ ಗೃಹ ಸಚಿವರು ಅವರನ್ನು ಬಂಧಿಸಿದ್ದು ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಈ ಬದುಕು ಮಾಡಿದ್ದಾರೆ ಎನ್ನುವುದು ಸ್ಪಷ್ಟ. ಡಿಕೆಶಿ ಅವರನ್ನು ಬಂಧಿಸಿ ವಿಚಾರಣೆ ಮಾಡಿದರೆ ಎಲ್ಲಾ ಸತ್ಯ ಹೊರಗೆ ಬರುತ್ತದೆ. ಪೆÇಲೀಸರು ರವಿಯವರನ್ನು ಐದು ಜಿಲ್ಲೆಗಳನ್ನು ಸುತ್ತಿಸಿ ಕರೆದುಕೊಂಡು ಹೋಗಲು ಅಣತಿ ನೀಡಿದವರು ಯಾರು? ಎಂಬುದು ಬಯಲಿಗೆ ಬರಲಿ ಎಂದರು.
ಸಿ.ಟಿ.ರವಿಯವರು ಸದನದಲ್ಲಿ ಯಾವುದೇ ಆಶ್ಲೀಲ ಪದ ಬಳಸಿಲ್ಲ ಎಂದು ಹೇಳುತ್ತಾರೆ. ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ಪ್ರಕರಣವನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದ್ದಾರೆ. ಆದರೂ ಕೂಡ ಸರ್ಕಾರ ಈ ಪ್ರಕರಣವನ್ನು ಯಾಕೆ ಇಷ್ಟು ಎಳೆದಾಡುತ್ತಿದೆ. ಇದರ ಹಿಂದೆ ಯಾರಿದ್ದಾರೆ? ಗೂಂಡಾಗಳನ್ನು ಬಿಟ್ಟು ರವಿಯವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದವರು ಯಾರು ? ಎಲ್ಲವೂ ಬಯಲಿಗೆ ಬರಬೇಕಾಗಿದೆ. ಅದು ಸಿಐಡಿಯಿಂದ ಸಾಧ್ಯವಿಲ್ಲ. ಅದಕ್ಕೆ ನ್ಯಾಯಾಂಗ ತನಿಖೆಗೆ ಸೂಕ್ತ ಎಂದರು.