ಶಿವಮೊಗ್ಗ ಡಿ.17 : ಶಿವಮೊಗ್ಗ: ವಕ್ಫ್ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ. ಮಠ ಮಂದಿರಗಳ ಪಹಣಿಯಲ್ಲಿ ಇನ್ನೂ ವಕ್ಫ್ ಆಸ್ತಿ ಎಂದೇ ಇದ್ದು ತಿದ್ದುಪಡಿ ಆಗಿಲ್ಲ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿ ವರದಿ ಇನ್ನೂ ಬಹಿರಂಗವಾಗಿಲ್ಲ. ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ವರದಿಯನ್ನು ಟೇಬಲ್ ಮಾಡಿದ್ದರು. ಆದರೆ ಈ ಬಗ್ಗೆ ವಿಧಾನಮಂಡಲದಲ್ಲಿ ಚರ್ಚೆಯಾಗಿಲ್ಲ. ಸರ್ಕಾರ ಆಸಕ್ತಿ ತೋರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ವಕ್ಪ್ ಆಸ್ತಿಯನ್ನು ರಾಜಕಾರಣಿಗಳು ಮತ್ತು ಪ್ರಮುಖರು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಇದರಲ್ಲಿ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಅನೇಕ ಗಣ್ಯರು ಸೇರಿದ್ದಾರೆ. ಅದೇ ರೀತಿ ಬಿಜೆಪಿಯವರೂ ಇದ್ದಾರೆ ಎಂಬ ಮಾಹಿತಿ ಇದೆ. ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ನುಂಗಿ ನೀರು ಕುಡಿದಿದ್ದಾರೆ. ನಾನು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿದ್ದೆ. ಈಗ ಮುಖ್ಯಮಂತ್ರಿಗಳು ಕೂಡ ಸಿಬಿಐ ತನಿಖೆಯಾಗಲಿ ಎನ್ನುತ್ತಿದ್ದಾರೆ. ಸಿಬಿಐಗೆ ಒಪ್ಪಿಸಬೇಕಾಗಿದ್ದು ರಾಜ್ಯ ಸರ್ಕಾರ. ಸದನದಲ್ಲಿ ಕಳೆದೆರಡು ದಿನಗಳಿಂದ ಚರ್ಚೆಯಾಗುತ್ತಿದ್ದು, ಇದನ್ನು ಕೂಡಲೇ ಸಿಬಿಐಗೆ ಒಪ್ಪಿಸಲಿ ಎಂದು ಒತ್ತಾಯಿಸಿದರು.
ವಕ್ಪ್ ಆಸ್ತಿ ಪಹಣಿಯಲ್ಲಿ ತಿದ್ದುಪಡಿಯಾಗಬೇಕು. ಅನ್ವರ್ ಮಾಣಿಪ್ಪಾಡಿ ವರದಿ ಚರ್ಚೆಗೆ ಬರಬೇಕು. ಇದನ್ನು ಹಗುರವಾಗಿ ನೋಡದೇ ಗಂಭೀರವಾಗಿ ಪರಿಗಣಿಸಬೇಕು. ಮುಡಾ ಪ್ರಕರಣವನ್ನು ಡೈವರ್ಟ್ ಮಾಡಲು ಸರ್ಕಾರ ಈ ರೀತಿ ನಾಟಕವಾಡುತ್ತಿದೆ. ಅಯೋಧ್ಯೆಗೆ ನ್ಯಾಯ ಸಿಕ್ಕಿದ ಹಾಗೆ ವಕ್ಫ್ ಹಗರಣಕ್ಕೂ ಮುಂದೊಂದು ದಿನ ನ್ಯಾಯ ಸಿಗುತ್ತದೆ. ಸತ್ಯ ಹೊರಗೆ ಬರುತ್ತದೆ ಎಂದರು.
ಯಾವ ಯಾವ ರಾಜಕಾರಣಿ ಇದರಲ್ಲಿ ಇದ್ದಾರೆ ಎಂಬುದು ಹೊರಗೆ ಬರಲಿ. ಅನ್ವರ್ ಮಾಣಿಪ್ಪಾಡಿ ಕೂಡ ತಮ್ಮ ಹೇಳಿಕೆಗಳನ್ನು ಎರಡು ಬಾರಿ ಬದಲಾಯಿಸಿದ್ದಾರೆ. ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದರು.
ರಾಜ್ಯ ಸರ್ಕಾರ ಬದುಕಿದೆಯಾ ಸತ್ತಿದೆಯಾ ಗೊತ್ತಿಲ್ಲ. ಶಿವಮೊಗ್ಗದಲ್ಲಿ ಗುಂಡಿಯೊಳಗೆ ರಸ್ತೆಗಳಿವೆ. ಕನಿಷ್ಟ ಮಣ್ಣು ಹಾಕಿ ಮುಚ್ಚುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ. ಆಶ್ರಯ ಬಡಾವಣೆಗೆ ಮೂಲಭೂತ ಸೌಲಭ್ಯಕ್ಕೆ ತುರ್ತಾಗಿ ಬೇಕಾಗಿರುವ ೧೫ ಕೋಟಿ ರೂ. ತರಲು ಉಸ್ತುವಾರಿ ಸಚಿವರಿಗೆ ಆಗಿಲ್ಲ. ನಾವು ನಗರಸಭೆಗೆ ಅನಿವಾರ್ಯವಾಗಿ ಮುತ್ತಿಗೆ ಹಾಕುವ ಪರಿಸ್ಥಿತಿ ಬರುತ್ತದೆ ಎಂದರು.
ಕ್ರಾಂತಿವೀರ ಬ್ರಿಗೇಡ್ಗೆ ನಿನ್ನೆ ಮಾರ್ಗದರ್ಶಕ ಮಂಡಳಿ ಮತ್ತು ರಾಜ್ಯದ ೬೦ ಪ್ರಮುಖರ ಸಭೆ ನಡೆದಿದೆ. ಫೆ. ೪ರಂದು ಬಸವನಬಾಗೇವಾಡಿಯಲ್ಲಿ ವಿಜೃಂಭಣೆಯಿಂದ ೧೦೦೮ ಸಾಧು ಸಂತರಿಗೆ ಪಾದಪೂಜೆ ಮಾಡಿ ಉದ್ಘಾಟನೆ ಮಾಡಲಾಗುವುದು. ಹಿಂದುಳಿದ, ದಲಿತರಿಗೆ ಅನ್ಯಾಯವಾಗುತ್ತಿದ್ದು, ಇದರ ಬಗ್ಗೆ ಕ್ರಾಂತಿವೀರ ಬ್ರಿಗೇಡ್ ಧ್ವನಿ ಎತ್ತಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ಇ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಗಣೇಶ್, ಸಂತೋಷ್, ಶ್ರೀಕಾಂತ್, ಪ್ರದೀಪ್, ಕುಬೇರಪ್ಪ, ಪ್ರಕಾಶ್, ಶಿವಕುಮಾರ್, ಜಾಧವ್ ಮೊದಲಾದವರಿದ್ದರು.