ಸಾಗರ ಶಿವಮೊಗ್ಗ.16§ : ತಾಲ್ಲೂಕಿನ ಕಾರ್ಗಲ್ ಸಮೀಪದ ಅರಲಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಪ್ಪಾನೆ ಪ್ರಕೃತಿ ಶಿಬಿರದ ಬಳಿ ಭಾನುವಾರ ಬ್ರೆಕ್ಫೇಲ್ ಆಗಿ ಖಾಸಗಿ ಬಸ್ ಪಲ್ಟಿಹೊಡೆದ ಘಟನೆ ನಡೆದಿದೆ.
ಮಂಗಳೂರಿನ ಬಿ.ಸಿ. ರಸ್ತೆ ವ್ಯಾಪ್ತಿಯ ೪೯ ಪ್ರಯಾಣಿಕರು ಪ್ಯಾಕೇಜ್ ಟೂರ್ಗಾಗಿ ಜೋಗಕ್ಕೆ ಆಗಮಿಸಿದ್ದರು. ಜೋಗ ಸಮೀಪದ ವಡನ್ಬೈಲ್ ಬಳೆ ಪದ್ಮಾವತಿ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತ ಸ್ಥಳಕ್ಕೆ ಸ್ಥಳೀಐರು ಆಗಮಿಸಿ ಬಸ್ನೊಳಗೆ ಗಾಯಗೊಂಡಿದ್ದ ಪ್ರಯಾಣಿಕರನ್ನು ಹೊರಗೆ ತಂದು ಖಾಸಗಿ ವಾಹನ ಹಾಗೂ ಅಂಬ್ಯುಲೆನ್ಸ್ ಮೂಲಕ ಕಾರ್ಗಲ್ ಹಾಗೂ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಕಾರ ನೀಡಿದರು.
ಬಸ್ನಲ್ಲಿದ್ದ ೪೯ ಪ್ರಯಾಣಿಕರ ಪೈಕಿ ೨೦ ಜನರಿಗೆ ಗಾಯವಾಗಿದ್ದು, ಅವರಲ್ಲಿ ಐದರಿಂದ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೆ ಶಾಸಕ ಗೋಪಾಲಕೃಷ್ಣ ಬೇಳೂರು ಆಸ್ಪತ್ರೆಗೆ ದೌಡಾಯಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಗಾಯಾಗಳುಗಳನ್ನು ಕರೆದೊಯ್ಯಲು ಬೇಕಾದ ಅಂಬ್ಯುಲೆನ್ಸ್ ವ್ಯವಸ್ಥೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ವೈಯಕ್ತಿಕ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.