ಸಾಮಾಜಿಕ ಜಾಲತಾಣದ ಚಿತ್ರ- ಕೃಪೆ ಗೂಗಲ್
-ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ’ ಎನ್ನುತ್ತಾನೆ ಸರ್ವಜ್ಞ.
ಹೌದು, ಸಾಲ ಎಂಬುದು ಪಡೆಯುವಾಗ ಸಿಹಿ, ಹಿಂದಿರುಗಿಸುವಾಗ ಕಹಿ. ಅದರಲ್ಲೂ ಮೈತುಂಬಾ ಸಾಲ ಮಾಡಿಕೊಂಡಿದ್ದರಂತೂ ಮುಗಿದೇ ಹೋಯಿತು! ಸಾಲ ಕೊಟ್ಟವರು ಮನೆ ಬಾಗಿಲಿಗೇ ಬಂದು ನಿಮ್ಮ ನೆಮ್ಮದಿ ಕಿತ್ತುಕೊಳ್ಳುತ್ತಾರೆ. ಆದ್ರೆ ಈ ಸರ್ವಜ್ಞನ ವಚನವನ್ನೆ ಉಲ್ಟಾ ಮಾಡೋ ಕೆಲ ಕಿರಾತಕ ಮನಸುಗಳಿವೆ ಎಂಬುದೇ ಈ ವಾರದ ನೆಗಿಟೀವ್ ಥಿಂಕಿಂಗ್ ಅಂಕಣದ ವಾಸ್ತವದ ವಿಷಯ.
ಬಡ್ಡಿ ವ್ಯವಹಾರಕ್ಕೆ ಯಾವುದೋ ಫೈನಾನ್ಸ್ ಮೂಲಕ ಸಾಲ ಕೊಟ್ಟವನು ರೌಡಿಗಳ ಮೂಲಕ ವಸೂಲಿ ಮಾಡುವುದು, ಅವರ ಮನೆಗೆ ಹೋಗಿ ಅವರಿಗೆ ಹೆದರಿಸುವುದು, ಬೆದರಿಸುವುದು, ಪಾತ್ರೆ ಪಗಡ ಹೊತ್ತುಕೊಂಡು ಬರುವುದು ಸಾಮಾನ್ಯವಾಗಿದೆ.
ಆದರೆ ನಂಬಿಕೆ, ವಿಶ್ವಾಸ, ಪ್ರೀತಿ ಮೇಲೆ ಸಾಲ ಕೊಟ್ಟವನು ಮರಳಿ ಕೇಳಿದಾಗ ದಿನಕ್ಕೊಂದು ಬಗೆಯ ನಾಟಕಗಳನ್ನು ಮಾಡುತ್ತಾನೆ. ಕೊಡುತ್ತೇನೆ ಎನ್ನುವ ಹುಸಿ ಮಾತುಗಳು ಮಾಮೂಲಿ. ಜಾಸ್ತಿ ಮಾತನಾಡಿದರೆ ನಿನ್ನ ಮೇಲೆ ಕಂಪ್ಲೇಂಟ್ ಕೊಡುತ್ತೇನೆ. ನೀನು ನನ್ನಿಂದ ಬಡ್ಡಿಪಡೆದಿದ್ದೀಯಾ ಎಂದು ಉಲ್ಟಾ ಹೊಡೆಯುವ ಕೆಲವೇ ಕೆಲವು ನಮ್ಮ ನಡುವಿನ ಮನಸುಗಳಿಗೆ ಹಿಡಿ ಶಾಪ ಹಾಕುವ ಅನಿವಾರ್ಯತೆ ಬಂದಿದೆ.
ಕೆಲ ಮನಸುಗಳು ಸಾಲ ಪಡೆದು ಕೊಟ್ಟವನಿಂದ ಮತ್ತೆ ಹುಟ್ಟೊಲ್ಲ ಎಂದು ದೂರವಾಗಲು ನಾನಾ ನಮೂನೆಯ ಆಟಗಳನ್ನು ಆಡುತ್ತಾರೆ. ಗೊತ್ತೇ ಇಲ್ಲವೇನೋ ಎಂಬಂತೆ ದೂರವಾಗುತ್ತಾನೆ. ಕೊಟ್ಟವನು ಇಲ್ಲಿ ಕೋಡಂಗಿ ಆಗುತ್ತಾನಲ್ಲವೇ?
ಕೆಲವರು ಅನಿವಾರ್ಯವಾಗಿ ಸಾಲ ವಾಪಸ್ ಬರೆದಿದ್ದಾಗ ದೇವರ ಮೊರೆ ಹೋಗುವುದು, ಭೂತಪ್ಪನಿಗೆ ಹರಕೆ ಹೊತ್ತುಕೊಳ್ಳುವುದು ಮಾಮೂಲಿಯಾಗಿದೆ. ಕೆಲವು ನಿಕೃಷ್ಟರು ಇರುವಷ್ಟು ದಿನ ಬೊಂಬಾಟಾಗಿರಬೇಕು ಎಂದು ದೇವರನ್ನೇ ದೂರ ತಳ್ಳುತ್ತಾರೆ.
ಮುನ್ನೊಂದು ದಿನ ಅವರಿಗೆ ಕೆಟ್ಟ ಕಾಲ ಬರುತ್ತದೆ ಎಂದು ಸಾಲ ಕೊಟ್ಟವನು ನೋಡಿಕೊಂಡು ಕೂರುವ ಅನಿವಾರ್ಯತೆ ಬಂದಿರುವುದು ನಮ್ಮ ನಡುವಿನ ಕೆಲವೇ ಕೆಲವು ವಾಸ್ತವಾಂಶಗಳಲ್ಲವೆ?