ಶಿವಮೊಗ್ಗ, ಡಿಸೆಂಬರ್ 07
ಮಕ್ಕಳ ಭವಿಷ್ಯ ಬೆಳಗಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು, ಶಿಕ್ಷಣ ಮತ್ತು ಇತರೆ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.
ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಅಡಿಯಲ್ಲಿ ಸಂಸದರ ನಿಧಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಶುಕ್ರವಾರ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ರಾಷ್ಟಿçÃಯ ಗ್ರಾಮೀಣ ಸಾಕ್ಷರತಾ ಮಿಷನ್ ಅಡಿ ಸಂಸದರ ನಿಧಿಯಲ್ಲಿ ಲೋಕಸಭಾ ಕ್ಷೇತ್ರದ 1 ಲಕ್ಷ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಬಹುದೆಂದು ತಿಳಿದ ತಕ್ಷಣ ಕಾರ್ಯೋನ್ಮುಖನಾಗಿದ್ದೇನೆ. ತಮ್ಮ ಕ್ಷೇತ್ರದಲ್ಲಿ ಒಟ್ಟು 2013 ಶಾಲೆಗಳಿಗೆ 1 ರಿಂದ 7 ನೇ ತರಗತಿವರೆಗಿನ 94056 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಇದ್ದು, ಕಂಪ್ಯೂಟರ್ ಶಿಕ್ಷಣ ಸಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಕಂಪ್ಯೂಟರ್ , ಡಿಜಿಟಲ್ ಸಾಕ್ಷರರಾಗಬೇಕು. ಯುನೈಟೆಡ್ ಕಿಂಗ್ಡಮ್ 18 ವರ್ಷ ತುಂಬದ ಮಕ್ಕಳು ಮೊಬೈಲ್ ಬಳಸಬಾರದೆಂದು ನಿರ್ಧಾರ ಕೈಗೊಂಡಿದೆ. ನಮ್ಮಲ್ಲಿಯೂ ಮಕ್ಕಳು ಶಾಲೆಗೆ ಮೊಬೈಲ್ ತರುವಂತಿಲ್ಲ. ಓದಿನ ಕಡೆ, ಕಂಪ್ಯೂಟರ್ ಸಾಕ್ಷರತೆ ಕಡೆ ಹೆಚ್ಚಿನ ಗಮನ ಹರಿಸಬೇಕು. ಇದು ವಿದ್ಯಾರ್ಥಿಗಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಕಳೆದ 12 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಕಾಲೇಜು, ಸರ್ಕಾರಿ ಮೆಡಿಕಲ್ ಕಾಲೇಜು, ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯ, ಇದೀಗ ಆಯುರ್ವೇದ ಕಾಲೇಜು ಹೀಗೆ ಸಾಕಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿವೆ. ದಕ್ಷಿಣ ಭಾರತದಲ್ಲೇ ಮೊದಲನೆಯದಾದ ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಈಗ ತಮ್ಮಡಿಹಳ್ಳಿಯಲ್ಲಿ 25 ಎಕರೆ ಜಾಗ ಮಂಜೂರಾಗಿದ್ದು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ರೂ.25 ಕೋಟಿ ಮಂಜೂರಾಗಿದೆ. ಇಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ ಮತ್ತು ಪದವಿ ನಂತರ ಉತ್ತಮ ಕೋರ್ಸ್ಗಳಿದ್ದು, ಈ ಕೋರ್ಸ್ ಮುಗಿದ ನಂತರ ಉತ್ತಮ ಉದ್ಯೋಗಾವಕಾಶಗಳು ಸಿಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸದರು ತಮ್ಮ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಮೊದಲನೆಯದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿದ್ದಾರೆ ಎಂದ ಅವರು ದುರ್ಗಿಗುಡಿ ಶಾಲಾ ಅಭಿವೃದ್ದಿಗೆ ತಾವು ಸಹಕರಿಸುವುದಾಗಿ ಭರವಸೆ ನೀಡಿದರು.
ಶಾಲೆಯ 867 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್, ಮಾಜಿ ಸೂಡಾ ಅಧ್ಯಕ್ಷರುಗಳಾದ ನಾಗರಾಜ್, ಜ್ಞಾನೇಶ್ವರ್, ಎಸ್ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮೋಹನೇಶ್, ದುರ್ಗಿಗುಡಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಭಾರತಿ, ದೈಹಿಕ ಶಿಕ್ಷಣ ನಿರ್ದೇಶಕ ನಿರಂಜನ, ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. , ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಸ್ವಾಗತಿಸಿದರು. ಕಲ್ಲೇಶ್ ವಂದಿಸಿದರು.