ಹಾವೇರಿ: ಹಾವೇರಿ ತಾಲೂಕು ಪಂಚಾಯಿತಿ ಕಚೇರಿ ಬಳಿ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಜನ ಸಂಪರ್ಕ ಕಾರ್ಯಾಲಯವನ್ನು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು ಉದ್ಘಾಟನೆ ಮಾಡಿದರು.
ಜನ ಸಂಪರ್ಕ ಕಾರ್ಯಾಲಯದ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಸಾರ್ವಜನಿಕರ ಅಹವಾಲು ಹಾಗೂ ಅವುಗಳ ಸೂಕ್ತ ಪರಿಹಾರಕ್ಕಾಗಿ ಜನ ಸಂಪರ್ಕ ಕಾರ್ಯಾಲಯ ಮಾಡಿದ್ದೇನೆ. ಸಾರ್ವಜನಿಕರು ತಮ್ಮ ಸಮಸ್ಯೆಗಳು, ಕೆಲಸ ಕಾರ್ಯಗಳಿಗೆ ಅಹವಾಲು ತೆಗೆದುಕೊಂಡು ಬರುತ್ತಾರೆ. ನಮ್ಮ ಕಚೇರಿಯಿಂದ ಬಂದಂತ ಪತ್ರಗಳು ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಬೇಕು
ಈ ಕಚೇರಿಯಲ್ಲಿ ಹಲವು ಸಭೆ ಮಾಡಬೇಕಾಗುತ್ತದೆ. ಪ್ರತಿ ಗುರುವಾರ ಹಾವೇರಿ ಜಿಲ್ಲೆಗೆ ಮೀಸಲಿಡುತ್ತೇನೆ, ಶುಕ್ರವಾರ ಗದಗ ಜಿಲ್ಲೆಗೆ ಮೀಸಲಿಡುತ್ತೇನೆ. ಬೆಳಿಗ್ಗೆ 11 ರಿಂದ 5 ಗಂಟೆವರೆಗೆ ಲಭ್ಯ ಇರುವೆ. ಈ ಕಚೇರಿ ಬಹಳ ಮುಕ್ತವಾಗಿರುತ್ತದೆ ಎಂದು ಹೇಳಿದರು
ಆರೋಗ್ಯ ಇಲಾಖೆಗೆ ಸರ್ಜರಿ ಮಾಡುವ ಅವಶ್ಯಕತೆ ಇದೆ. ಸರಿಯಾಗಿ ಔಷಧಿ ಸಿಗುತ್ತಿಲ್ಲ. ಔಷಧಿಗೆ ಪ್ರತಿ ತಿಂಗಳು ಇಂಡೆಂಟ್ ಹಾಕುತ್ತಿದ್ದಾರೆ. ಪ್ರಮುಖ ಔಷಧಿ ಯಾಕೆ ಸ್ಟಾಕ್ ಇಡಲ್ಲ? ಸರಕಾರದ ಹಣಕಾಸಿನ ದಿವಾಳಿಗೆ ತನ್ನ ಕುರುಹು ಬಿಡಲು ಪ್ರಾರಂಭಿಸಿದೆ. ಸಾರ್ವಜನಿಕ ಆಸ್ಪತ್ರೆ ದರ ಹೆಚ್ಚಿಸಿದ್ದಾರೆಬಳ್ಳಾರಿಯಲ್ಲಿ ಬಾಣಂತಿಯರ ಸಾವಾಗಿದೆ. ಅವರ ಸಾವಿಗೆ ಎಷ್ಟೇ ದುಡ್ಡು ಕೊಟ್ಟರೂ ಪರಿಹಾರ ಸಿಕ್ಕಂತಾಗುವುದಿಲ್ಲ. ಕಾಂಗ್ರೆಸ್ ನವರು ಪ್ರತಿಪಕ್ಷದಲ್ಲಿದ್ದಾಗ ಎಷ್ಟು ಮಾತನಾಡುತ್ತಿದ್ದರು. ಈ ಕಡೆಗೆ ಸಿಎಂ ಯಾಕೆ ಗಮನ ಹರಿಸಲು ಆಗಿಲ್ಲ? ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಒಂದು ತಲೆ ದಂಡ ಆಗಿಲ್ಲ. ಇದುವರೆಗೂ ಆರೋಗ್ಯ ಇಲಾಖೆ ಕಾರ್ಯದರ್ಶಿ ಭೇಟಿ ಕೊಟ್ಟಿಲ್ಲ. ಯಾರನ್ನ ರಕ್ಷಣೆ ಮಾಡಲು ಹೊರಟಿದ್ದಾರೆ. ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟರ ರಕ್ಷಣೆಗೆ ಸಾಮಾನ್ಯ ಜನರ ಜೀವ ಬಲಿ ಪಡೆಯುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಆರೋಗ್ಯ ಇಲಾಖೆಯೇ ರೋಗ ಗ್ರಸ್ಥ ಆಗಿದೆ. ಶಾಲೆ, ಆಸ್ಪತ್ರೆ ಯಾವುದೂ ಸರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಪೂರ್ಣ ಪ್ರಮಾಣದ ವೈದ್ಯರನ್ನು ನೇಮಕ ಮಾಡಬೇಕು. ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿದರೆ, ಅವರು ಸರ್ಕಾರಿ ಆಸ್ಪತ್ರೆಗೆ ಬರಲು ನಿರಾಕರಿಸುತ್ತಾರೆ. ಜಾನುವಾರುಗಳ ಸಾವಾಗುತ್ತಿದೆ. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ನಾವು ಅಧಿಕಾರದಲ್ಲಿದ್ದಾಗ ಸುಮಾರು 14 ಕೋಟಿ ರೂ. ಬಿಡುಗಡೆ ಮಾಡಿ, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚಿಸಿದ್ದೇವು, ಸರ್ಕಾರ ಜೀವಂತ ಇದ್ದರೆ ಇವೆಲ್ಲ ಮಾಡಲು, ಸಾಧ್ಯ, ಈ ಸರ್ಕಾರ ಜೀವಂತ ಇಲ್ಲ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ದುರಸ್ಥಿ ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣ ಮಾಡುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ರೈಲ್ವೆ ಯೋಜನೆಗಳ ಕುರಿತಂತೆಯೂ ಹುಬ್ಬಳ್ಳಿಯ ನೈರುತ್ಯ ವಲಯ ಅಧಿಕಾರಿಗಳ ಜೊತೆ ಸಭೆ ಮಾಡಿ ಬ್ಯಾಡಗಿ ರೈಲ್ವೆ ನಿಲ್ದಾಣ, ಶಿವಮೊಗ್ಗ ರಾಣೆಬೆನ್ನೂರು ಲೈನ್ ಆರಂಭಕ್ಕೆ ಸಮಸ್ಯೆಗಳಿಗೆ ಅತಿ ಬೇಗ ಪರಿಹಾರ ಕಂಡುಕೊಳ್ಳಲಾಗುವುದು. ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರಿಗೆ ಮಾಡಿದ್ದೇನೆ. ರೈಲ್ವೆ ಮಂಡಳಿಗೆ ಪ್ರಸ್ತಾವನೆ ಹೋಗಿದೆ. ಆದಷ್ಟು ಬೇಗ ತೀರ್ಮಾನ ಆಗಲಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಗೆ ನರೇಗಾ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಒಂದು ಕಡೆ ಉದ್ಯೋಗ ಸೃಷ್ಟಿ ಇನ್ನೊಂದೆಡೆ ಆಸ್ತಿ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸಿಸಿ ರಸ್ತೆಗಳ ನಿರ್ಮಾಣ ಆಗುತ್ತಿದೆ. ಅಲ್ಲಿ ಡ್ರೈನೇಜ್ ಸರಿಯಾಗಿ ಆಗುತ್ತಿಲ್ಲ.ಅದನ್ನು ವ್ಯವಸ್ಥಿತವಾಗಿ ಮಾಡಬೇಕು. ರಾಜ್ಯ ಸರ್ಕಾರ ಅನಷ್ಠಾನ ಮಾಡುವ ಕಾರ್ಯ ಮಾಡಬೇಕು ಎಂದರು.
ಹಾವೇರಿಯಲ್ಲಿ ಅಕ್ರಮ ಲೇಔಟ್ ಗಳನ್ನು ತಡೆಯಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಅಧಿಕೃತ ಲೇಔಟ್ ಗಳಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಅನಧಿಕೃತ ಲೇಔಟ್ ಗಳನ್ನು ಮಾಡಿದರೆ ಕಷ್ಟವಾಗಲಿದೆ. ಜಿಲ್ಲಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು ಎಂದು ಹೇಳಿದರು.
ಬಿಜೆಪಿಯಲ್ಲಿ ಯಾವ ಬಣದಲ್ಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಬಣದಲ್ಲಿದ್ದೇನೆ. ವಕ್ಪ್ ಆದೇಶದಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ, ಮಠಗಳು, ಕೆರೆಗಳು, ಆಸ್ಪತ್ರೆ, ಶಾಲೆಗಳು ಎಲ್ಲದಕ್ಕೂ ಸಮಸ್ಯೆಯಾಗಿದೆ. ಅದರ ವಿರುದ್ದ ಎಲ್ಲರೂ ತೀವ್ರವಾಗಿ ಹೋರಾಟ ಮಾಡಬೇಕಿದೆ. ಆ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದರು.