ಸಾಗರ : ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಇಸ್ಕಾನ್ ಸನ್ಯಾಸಿ ಚಿನ್ಮಯ್ ಕೃಷ್ಣಪ್ರಭು ಬಂಧಿಸಿರುವ ಧೋರಣೆ ವಿರುದ್ದ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ವಿಭಾಗದ ವಕ್ತಾರ ಲೋಹಿತಾಶ್ವ, ಕಳೆದ ನಾಲ್ಕೈದು ತಿಂಗಳಿನಿಂದ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಂತ ಖಂಡನೀಯವಾದದ್ದು. ಒಬ್ಬ ಹಿಂದೂ ಎಲ್ಲೆ ಇರಲಿ ಅವನು ನಮ್ಮ ಬಂಧು ಎನ್ನುವ ಮನೋಭಾವ
ಪ್ರತಿಯೊಬ್ಬರಲ್ಲೂ ಬರಬೇಕು. ಹಿಂದೂಧರ್ಮದ ಮೇಲೆ ಪದೇಪದೇ ದೌರ್ಜನ್ಯ ನಡೆಯುತ್ತಿದೆ. ಹಿಂದೂಧರ್ಮವನ್ನು ನಾಶಮಾಡುವ ಪ್ರಯತ್ನ ನಡೆಯುತ್ತಿದೆ. ಆದರೆ ನಮ್ಮ ಹಿರಿಯರ ತ್ಯಾಗಬಲಿದಾನ, ಸಮರ್ಪಣಾ ಭಾವ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ನಮ್ಮ ಧರ್ಮವನ್ನು ಹಿಮ್ಮೆಟ್ಟಿಸಲು ಯಾರ ಕೈನಿಂದಲೂ ಸಾಧ್ಯವಾಗುತ್ತಿಲ್ಲ. ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಬಾಂಗ್ಲಾದಲ್ಲಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆಸುವ ಮೂಲಕ ನಮ್ಮನ್ನು ಬೆದರಿಸುವ ತಂತ್ರ ನಡೆಸಲಾಗುತ್ತಿದೆ. ತಕ್ಷಣ ಹಿಂದೂ ಧರ್ಮಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ಭಾರತ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಸೂಕ್ತ ಎಚ್ಚರಿಕೆ ಬಾಂಗ್ಲಾ ಸರ್ಕಾರಕ್ಕೆ ನೀಡಬೇಕು ಎಂದು ಹೇಳಿದರು.
ಜಡೆ ಕಾನುಕೇರಿ ಮಠದ ಶ್ರೀ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಿಂದೂ ಧರ್ಮ ಉಳಿದರೆ ಮಾತ್ರ ನಾವೆಲ್ಲಾ
ಉಳಿಯುತ್ತೇವೆ. ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಹೋಗುವತ್ತ ನಮ್ಮ ಚಿತ್ತ ಇರಬೇಕು. ಧರ್ಮ ಮತ್ತು ದೇಶಕ್ಕಾಗಿ ನಾವು ಬೀದಿಗಿಳಿದು ಹೋರಾಟ ಮಾಡುವ ದುಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮಠಾಧೀಶರು ಒಕ್ಕೊರಲಿನ ಧ್ವನಿ ಎತ್ತಿದ್ದೇವೆ. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಬೇಕು. ಇಲ್ಲವಾದಲ್ಲಿ ಇನ್ನಷ್ಟು ಉಗ್ರವಾದ ಪ್ರತಿಭಟನೆ ದೇಶಾದ್ಯಂತ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಹೊಸನಗರ ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಭಜರಂಗ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ್ ಶಿವಾಜಿ ಮಾತನಾಡಿದರು. ಸಭೆಯಲ್ಲಿ ಡಾ. ರಾಜನಂದನಿ, ಪ್ರಶಾಂತ್ ಕೆ.ಎಸ್., ಮಲ್ಲಿಕಾರ್ಜುನ ಹಕ್ರೆ, ಸವಿತಾ ವಾಸು, ಕೆ.ವಿ.ಪ್ರವೀಣ್, ಐ.ವಿ.ಹೆಗಡೆ, ಸುಧೀಂದ್ರ ಕೆ.ಎಸ್., ಕೋಮಲ್ ರಾಘವೇಂದ್ರ, ಸುನೀಲ್ ರುದ್ರಪ್ಪ. ಅ.ಶ್ರೀ.ಆನಂದ್, ಕೊಟ್ರಪ್ಪ ನೇದರವಳ್ಳಿ, ಅರಗ ಚಂದ್ರಶೇಖರ್, ಸಂಘ ಪರಿವಾರದ ಪ್ರಮುಖರು, ನಗರಸಭಾ ಸದಸ್ಯರು, ಪರಿವಾರದ ವಿವಿಧ ಸ್ತರದ ಪ್ರಮುಖರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಮಹಾಗಣಪತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.