ಶಿವಮೊಗ್ಗ,ಡಿ.2: ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭವು ಡಿ.5ರಂದು ನಡೆಯಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ್ರು ತಿಳಿಸಿದರು.
ಅವರು ಇಂದು ಬಸವಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 5 ಗಂಟೆಗೆ ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಬೆಕ್ಕಿನ ಕಲ್ಮಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಮ್ಮ ಲಿಂಗ ಹಸ್ತದಿಂದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಅನುಗ್ರಹಿಸಲಿದ್ದಾರೆ. ಈ ದೀಕ್ಷಾ ವಿಧಿ ವಿಧಾನದ ಸಂದರ್ಭದಲ್ಲಿ, ಈರ್ವರು ಶ್ರೀಗಳ ಜೊತೆಯಲ್ಲಿ 6 ಷಡುಸ್ಥಲ ಮೂರ್ತಿಗಳು, ಒಬ್ಬರು ವಚನಮೂರ್ತಿಗಳು ಹಾಗೂ ನಾಡಿನ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ ಎಂದರು.
11 ಗಂಟೆಯಿAದ ಮಾಚೇನಹಳ್ಳಿ ಡೈರಿ ಪಕ್ಕದಲ್ಲಿರುವ ಬಸವನೆಲೆಗೆ ನೀಡಿರುವ ಜಾಗದಲ್ಲಿ ನಡೆಯುವ ಬಹಿರಂಗ ಅಧಿವೇಶನದಲ್ಲಿ ಈರ್ವರು ಶ್ರೀಗಳ ಜೊತೆಯಲ್ಲಿ ನಿಟ್ಟೂರಿನ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ, ಹಾಗೂ ಕಡೂರಿನ ಯಳನಾಡು ಸಂಸ್ಥಾನ ಮಠದ ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಾಡಿನ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗುವ ಈ ಅಧಿವೇಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಉಪಸ್ಥಿತರಿರುವರು. ಚಿನ್ಮಯನುಗ್ರಹ ದೀಕ್ಷೆಯ ಕುರಿತಾಗಿ ನಾಡಿನ ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಾಲಿ ಹಾಗೂ ಮಾಜಿ ಶಾಸಕರುಗಳು, ಸಮಾಜದ ಮುಖಂಡರುಗಳು, ಸಂಘ ಸಂಸ್ಥೆಗಳ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿರುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶಿವಮೊಗ್ಗ ತಹಶೀಲ್ದಾರ್, ನಿದಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಭಾಗವಹಿಸಲಿದ್ದಾರೆ. ಈ ಅಧಿವೇಶನದಲ್ಲಿ 2ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಬಸವ ತತ್ವದ ಪ್ರಕಾರ, ಚಿನ್ಮಯಾನುಗ್ರಹ ದೀಕ್ಷೆ ಎಂದರೆ, ಶ್ರೀಗಳಿಗೆ ಭಗವಂತನ ಚೈನ್ಮಯ (ಜ್ಞಾನಸ್ವರೂಪಿ) ಅನುಗ್ರಹವನ್ನು ನೀಡುವ ಆಧ್ಯಾತ್ಮಿಕ ದೀಕ್ಷೆ. ಇದು ಭೌತಿಕ ಪೂಜಾ ಪ್ರಕ್ರಿಯೆಗಳಿಂದ ಮುಕ್ತವಾ ಗಿದ್ದು, ಜೀವಾತ್ಮ ಮತ್ತು ಪರಮಾತ್ಮನ ಏಕತೆಯನ್ನು ಅನುಭವಿಸುವ ಪರಮಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದರು.
ಚಿನ್ಮಯಾನುಗ್ರಹವು ಕೇವಲ ಭಕ್ತಿ ಪ್ರಕ್ರಿಯೆಯ ಆರಂಭವಲ್ಲ; ಅದು ಜೀವಾತ್ಮ ಮತ್ತು ಶಿವಾತ್ಮನ ಒಂದಾಗುವ ಪರಮಾವಸ್ಥೆ, ಚಿನ್ಮಯಾನುಗ್ರಹ ದೀಕ್ಷೆಯನ್ನು ಜ್ಞಾನಪೂರ್ಣ ಗುರುಗಳು ಭಕ್ತನಿಗೆ ನೀಡುತ್ತಾರೆ, ಅದು ಶರಣನ ಜೀವನವನ್ನು ಆಧ್ಯಾತ್ಮಿಕ ಪಥದಲ್ಲಿ ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಕುಲ, ಜಾತಿ ಅಥವಾ ಲಿಂಗ ಯಾವುದಕ್ಕೂ ಆದ್ಯತೆಯಿಲ್ಲ, ಅಂತರAಗ ಶುದ್ದತೆ ಮಾತ್ರ ಮುಖ್ಯ. ಚಿನ್ಮಯಾನುಗ್ರಹವನ್ನು ಪಡೆದ ಗುರುಗಳು ತಮ್ಮ ಶಿಷ್ಯಂದಿರ ಆಧ್ಯಾತ್ಮಿಕ ಮಾರ್ಗದರ್ಶಕ, ಶಿಕ್ಷಕ, ಮತ್ತು ಪ್ರಾಣಸಹಾಯ ಆಗಿರುತ್ತಾರೆ. ಶಿಷ್ಯಂದಿರನ್ನು ಅಜ್ಞಾನದಿಂದ ಜ್ಞಾನಕ್ಕೆ ಅಶುದ್ಧತೆಯಿಂದ ಶುದ್ಧತೆಗೆ, ಮತ್ತು ದೈತದಿಂದ ಏಕತೆಗೆ ಕೊಂಡೊಯ್ಯುವಲ್ಲಿ ಗುರುಗಳು ತಮ್ಮ ಜೀವನವನ್ನು ಸಮರ್ಪಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಹೆಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಜಿ.ವಿಜಯ್‌ಕುಮಾರ್, ಬಾಳೆಕಾಯಿ ಮೋಹನ, ಟಿ.ಬಿ.ಜಗದೀಶ್, ಕಿರಣ್, ಮಹಾರುದ್ರ, ಹಾಲಸ್ವಾಮಿ ಉಪಸ್ಥಿತರಿದ್ದರು.