ಶಿವಮೊಗ್ಗ,ಫೆ.06:
ಸ್ಪೋಟ ಪ್ರಕರಣ ರಾಜ್ಯವ್ಯಾಪಿ ಭಾರೀ ಚರ್ಚೆಯಾಗಿ ಅಕ್ರಮ ಜಿಲೆಟಿನ್ ಬಳಕೆ ಜೊತೆ ಅಕ್ರಮ ಗಣಿಗಾರಿಕೆ ವಿರುದ್ದ ಕ್ರಮ ಕೈಗೊಳ್ಳುವ ಲಕ್ಷಣ ಕಂಡುಬಂದಿದ್ದವು. ಈ ನಡುವೆ ಸಕ್ರಮ ಎನ್ನುವ ಹಲವು ಮೂಲಗಳು ಸಕ್ರಮದ ಮೂಲಕ ಅಕ್ರಮಕ್ಕೂ ತೇಪೆ ಹಚ್ಚಲು ಮುಂದಾಗಿದ್ದರು.
ಹುಣಸೋಡು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕೆ ಎಂ ಶಾಂತ್ ಕುಮಾರ್ ಮಾಹಿತಿ ನೀಡಿರುವುದು ಸ್ಪೋಟ ಪ್ರಕರಣ ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತದೆ.
ಹುಣಸೋಡ ಕಲ್ಲು ಕಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಪೋಟಗೊಂಡು ಆರು ಕಾರ್ಮಿಕರು ಮೃತಪಟ್ಟಿದ್ದರು. ಘಟನೆ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜಾಗದ ಮಾಲೀಕ ಶಂಕರಗೌಡ, ಅವಿನಾಶ್ ಕುಲಕರ್ಣಿ, ಶ್ರೀರಾಮುಲು , ಪುತ್ರ ಮಂಜುನಾಥ್ ಸಾಯಿ ಎಂದು ಗುರುತಿಸಲಾಗಿದೆ. ಇಲ್ಲಿ ತಂದೆ ಮಗ ಇಬ್ಬರು ಆಂಧ್ರದ ರಾಯದುರ್ಗದಿಂದ ಶಿವಮೊಗ್ಗಕ್ಕೆ ಸ್ಪೋಟಕ ರವಾನಿಸಿದ್ದರು ಎಂದು ಶಾಂತ ಕುಮಾರ್ ಮಾಹಿತಿ ನೀಡಿದ್ದಾರೆ. ಸ್ಪೋಟಕ ತುಂಬಿದ್ದ ಎರಡು ಗೋದಾಮುಗಳನ್ನು ಕೂಡ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ಇದುವರೆಗೆ ಒಟ್ಟು ೮ ಜನರನ್ನು ಬಂಧಿಸಲಾಗಿದ್ದು, ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.