ಶಿವಮೊಗ್ಗ ನ.23: ಜಾಗತಿಕ‌ ತಾಪಮಾನ ಮತ್ತು‌ ಹವಮಾನ ವೈಪರೀತ್ಯಗಳು ತುರ್ತು ಪರಿಸ್ಥಿತಿಯಾಗಿ ಬದಲಾಗುತ್ತಿದೆ‌ ಎಂದು ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ 2024-25 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಎನ್.ಎಸ್.ಎಸ್ ಘಟಕ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಮ್ಮ ಎಲ್ಲ ಅಭಿವೃದ್ಧಿಗಳ ಮೂಲ, ವಿದ್ಯುಚ್ಚಕ್ತಿ. ಆದರೆ ವಿದ್ಯುತ್ ಚಾಲಿತ ಯಂತ್ರಗಳ ಅತಿಯಾದ ಬಳಕೆ ಹಾಗೂ ಕಾರ್ಬನ್ ದೈ ಆಕ್ಸೈಡ್ ನ ಮಿತಿ ಮೀರಿದ ಹೊರ ಹಾಕುವಿಕೆಯು ಪರಿಸರ ಹಾನಿಗೆ ಮುಖ್ಯ ಕಾರಣ. ಹಸಿರು ಶಕ್ತಿ ಹಾಗೂ ಸೌರ ಶಕ್ತಿಯ ಬಳಕೆಯನ್ನು ಹೆಚ್ಚು ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ದೇಶಗಳು ಪ್ರಾಕೃತಿಕ ವೈಪರೀತ್ಯಗಳಿಂದ ಬಳಲಿದಾಗ, ಆರ್ಥಿಕವಾಗಿ ಮುಂದುವರಿದ ದೇಶಗಳು ಸಹಾಯ ಹಸ್ತ ವನ್ನು ನೀಡಬೇಕು.

ನೀರಿನ ಮೂಲಗಳನ್ನು ಶುದ್ದವಾಗಿಟ್ಟುಕೊಳ್ಳುವುದು  ಇಂದಿನ ಜೀವನಕ್ಕೆ ಪ್ರಮುಖ ಅವಶ್ಯಕತೆಯಾಗಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿನಂತೆ, ಪರಿಸರ ರಕ್ಷತಿ ರಕ್ಷಿತಃ.. ನಾವು ಪರಿಸರದ ರಕ್ಷಣೆ ಮಾಡಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತಮ್ಮನು ತಾವು ತೊಡ ಗಿಸಿಕೊಂಡು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕೆಂದು ಕರೆ ನೀಡಿದರು.

ಪ್ರಾಧ್ಯಾಪಕ ಡಾ.ನಾಗರಾಜ ಪರಿಸರ ಮಾತನಾಡಿ, ಕಾಲೇಜಿನ ಅಮೂಲ್ಯ ಕ್ಷಣಗಳನ್ನು‌ ಬಳಸಿಕೊಂಡು ಸಮಾಜಿಕ ಕಾರ್ಯಕ್ಕೆ ಸಮರ್ಪಿತರಾಗಿ. ಹುಟ್ಟು ಹಬ್ಬದ ದಿನದಂದು ದುಂದು ವೆಚ್ಚಕ್ಕಿಂತ, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಸಂಭ್ರಮಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಕಾಂತರಾಜ್, ಪ್ರಾಧ್ಯಾಪಕ ಡಾ.ಬಿ.ಸಿ.ಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!