ಶಿವಮೊಗ್ಗ,ನ.೯: ನಗರದ ವಿಶ್ವೇಶ್ವರಯ್ಯ ರಸ್ತೆಯ (ವೀರಭದ್ರ ಟಾಕೀಸ್ ಮುಂಭಾಗ ಇರುವ)ಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು, ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿ ಪಡೆ ಕಾರ್ಯಕರ್ತರು ಇಂದು ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೀರಭದ್ರೇಶ್ವರ ಟಾಕೀಸ್ ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್ ಕಾಂಪ್ಲೆಕ್ಸ್ನಲ್ಲಿರುವ ದ್ವಿಚಕ್ರ ವಾಹನ ಗ್ಯಾರೇಜ್ ರವರಿಂದ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮಾರ್ಗಗಳಲ್ಲಿ ರಿಪೇರಿಗೆ ಬಂದ ವಾಹನಗಳನ್ನು ನಿಲ್ಲಿಸುವುದರಿಂದ ಮತ್ತು ಪಕ್ಕದಲ್ಲೇ ಇರುವ ಫರ್ನಿಚರ್ ಅಂಗಡಿಯವರು ಫರ್ನಿಚರ್ಗಳನ್ನು ಪಾದಚಾರಿ ಮಾರ್ಗದಲ್ಲಿ ಇಡುವುದರಿಂದ ಪಾದಚಾರಿ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದೇ ಮುಖ್ಯ ರಸ್ತೆಯಲ್ಲಿಯೇ ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇಲ್ಲಿ ಶಾಲಾ-ಕಾಲೇಜುಗಳು ಇರುವುದರಿಂದ ಮಕ್ಕಳು ಮತ್ತು ವಯೋವೃದ್ಧರು ಮುಖ್ಯರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತಾವು ಈ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕು. ಹಾಗೂ ಈ ಮಾರ್ಗದಲ್ಲಿ ನೋ-ಪಾಕಿಂಗ್ (ಓಔ PಂಖಏIಓಉ) ಇರುವ ಜಾಗಗಳಲ್ಲಿ ಪಾಕಿಂಗ್ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಇದು ಮಾತ್ರವೇ ಅಲ್ಲ, ಈ ಹಿಂದೆ ಅಮೀರ್ ಅಹಮದ್ ವೃತ್ತದಿಂದ ಜ್ವರಾರಿ ಮೆಡಿಕಲ್ ಸ್ಟೋರ್ ನ ವರೆಗೆ ಪಾಕಿಂಗ್ ಮಾಡುವಂತಿಲ್ಲ ಎಂಬ ಆದೇಶವನ್ನ ಪೊಲೀಸ್ ಇಲಾಖೆಯಿಂದಲೇ ಮುರಿದುಬಿದ್ದಿದೆ. ನೆಹರೂ ರಸ್ತೆಗಳಲ್ಲಿ ಡಬ್ಬಲ್ ರಸ್ತೆಗಳಿದ್ದರೂ ಸುಗಮ ಸಂಚಾರ ಕಷ್ಟವಾಗಿದೆ. ದುರ್ಗಿಗುಡಿ ಏಕಮುಖ ಸಂಚಾರವಿದ್ದರೂ ದ್ವಿಮುಖ ಸಂಚಾರಿಯಾಗಿ ಪರಿವರ್ತನೆಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖರಾದ ವಿಜಯಕುಮಾರ್, ಜನಾರ್ಧನ, ಅಂಕುಶ್, ಚೇತನ್, ಉತ್ತಮ್, ಗುರು ವಿ ಶೇಟ್ ಉಪಸ್ಥಿತರಿದ್ದರು.