ಚಿಕ್ಕಮಗಳೂರು,ಜ.31:
ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ದಂಧೆಯ ಮೂಲಕ ಕಳೆದ ಐದು ತಿಂಗಳಿನಿಂದ ಬಾಲಕಿಯೊರ್ವಳ ಮೇಲೆ ಸುಮಾರು 30 ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂತ್ರಸ್ತ ಅಪ್ರಾಪ್ತ ವಯಸ್ಕಳನ್ನು ರಕ್ಷಿಸಿ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.
ನಿನ್ನೆ ಚಿಕ್ಕಮಗಳೂರು ನಗರದಲ್ಲಿರುವ ಸಾಂತ್ವಾನ ಕೇಂದ್ರಕ್ಕೆ ಆಕೆಯನ್ನು ಕಳಿಸಲಾಗಿದೆ. ಆರೋಪಿಗಳ ವಿರುದ್ದ ದೂರು ದಾಖಲಿಸಲು ಮಕ್ಕಳ ಕಲ್ಯಾಣ ಸಮಿತಿ ಶೃಂಗೇರಿ ಪೊಲೀಸರಿಗೆ ಸೂಚಿಸಿದೆ.
ವಿವರ:
ಈ ಮೊದಲು ಬಾಲಕಿ ಮೇಲೆ ಓರ್ವ ಅತ್ಯಾಚಾರವೆಸಗಿದ್ದು, ಇದನ್ನು ಮೊಬೈಲ್ ನಲ್ಲಿ ವಿಡಿಯೊ ಮಾಡಿಕೊಂಡಿದ್ದ ಎನ್ನಲಾಗಿದೆ. ನಂತರ ತನ್ನೊಂದಿಗೆ ಸಹಕರಿಸದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿ ಮತ್ತೆ ಮತ್ತೆ ಅತ್ಯಾಚಾರವೆಸಗಿದ್ದನು ಎಂದು ಹೇಳಲಾಗುತ್ತಿದೆ. ತನ್ನ ಸ್ನೇಹಿತರು ಪರಿಚಿತರನ್ನು ಕಳಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಲು ಆತ ಹೇಳುತ್ತಿದ್ದನೆನ್ನಲಾಗಿದೆ. ಪರಿಚಯವೇ ಇಲ್ಲದ 20 ಕ್ಕೂ ಹೆಚ್ಚು ಮಂದಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ತಾಯಿ ಕಳೆದುಕೊಂಡ ಮೇಲೆ ಬಾಲಕಿ ಸ್ವಂತ ಊರಿಂದ ಇಲ್ಲಿ ಚಿಕ್ಕಮ್ಮ ಎಂದು ಹೇಳಲಾಗುತ್ತಿದ್ದ ಮನೆಗೆ ಬಂದಿದ್ದಳೆನ್ನಲಾಗಿದೆ.
ವೇಶ್ಯಾವಾಟಿಕೆ ಜಾಲವೇ…?
ಮತ್ತೊಂದು ಮೂಲಗಳ ಪ್ರಕಾರ ಹದಿನೈದು ವರುಷದ ಬಾಲಕಿಯನ್ನು ಮುಂದಿಟ್ಟುಕೊಂಡು ಮಹಿಳೆಯೊಬ್ಬಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳಂತೆ. ಬಾಲಕಿಯ ರಕ್ಷಣೆ ಸಮಯದಲ್ಲಿ ಇಷ್ಟೇಲ್ಲಾ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ.