ಶಿವಮೊಗ್ಗ,ಜ.29:
ಪ್ರತಿಯೊಬ್ಬರೂ ಕುಷ್ಟರೋಗಿಗಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಅವರ ಆತ್ಮಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಸ್ಪರ್ಶ್ ಕುಷ್ಟರೋಗ ಜಾಗೃತಿ ಆಂದೋಲನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 2021ರ ಜನವರಿ 31ರಿಂದ ಫೆಬ್ರವರಿ 13ರವರೆಗೆ ಕುಷ್ಟರೋಗದ ಕುರಿತು ಜನರಲ್ಲಿ ಅರಿವು ಮೂಡಿಸಲು ನಡೆಸಲಾಗುತ್ತಿರುವ ಸ್ಪರ್ಶ್ ಜಾಗೃತಿ ಆಂದೋಲನದ ಕಾರ್ಯಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಅಧಿಕಾರಿಗಳು ತಮ್ಮ ಜಬಾಬ್ದಾರಿ ಅರಿತು ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಕುಷ್ಟರೋಗಿಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುವಂತೆ ಅವರು ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಕುಷ್ಟರೋಗ ಗುಣಪಡಿಸಬಹುದಾದ ರೋಗ. ಗಾಂಧೀಜಿಯವರ ಆಶಯದಂತೆ ಕುಷ್ಟರೋಗ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದ ಅವರು, ನಮ್ಮ ಸುತ್ತಮುತ್ತಲ ಪರಿಸರದಲ್ಲಿ, ನೆರೆ-ಹೊರೆಯವರಲ್ಲಿ ಹಾಗೂ ಸಮುದಾಯದಲ್ಲಿ ಕುಷ್ಟರೋಗಿಗಳು ಕಂಡುಬಂದರೆ ಅವರಿಗೆ ಆರೋಗ್ಯ ಇಲಾಖೆಯಲ್ಲಿ ದೊರೆಯುವ ಉಚಿತ ಚಿಕಿತ್ಸೆ ಕೊಡಿಸುವಲ್ಲಿ ಶ್ರಮಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ|| ಶಮಾ ಅವರು ಮಾತನಾಡಿ, ದೇಹದ ಮೇಲಿನ ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ಅಥವಾ ತಾಮ್ರಬಣ್ಣದ ಮಚ್ಚೆಗಳು, ಕೈ ಅಥವಾ ಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದಿರುವ ಜೋವು ಹಿಡಿಯುವ, ಮುಖದ ಮೇಲೆ, ಕಿವಿಯ ಮೇಲೆ ಮಚ್ಚೆಯಂತಹ ಹೊಳಪು ಇರುವುದು ಕುಷ್ಟರೋಗದ ಲಕ್ಷಣಗಳಾಗಿವೆ. ಇದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ರೋಗ ಗುಣವಾಗಲಿದೆ ಎಂದ ಅವರು, ಚಿಕಿತ್ಸೆ ಪಡೆಯದ ರೋಗಿಗಳ ಮೂಗಿನ ದ್ರವದಿಂದ, ಉಸಿರಾಟ ಮೂಲಕ ಆರೋಗ್ಯವಂತರಿಗೆ ಹರಡುವ ಅಪಾಯವಿದೆ ಎಂದವರು ನುಡಿದರು.
ರೋಗದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದಾಗಿ ಭವಿಷ್ಯದಲ್ಲಿ ಉಂಟಾಗಬಹುದಾದ ಅಂಗವಿಕಲತೆಯನ್ನು ತಡೆಗಟ್ಟಬಹುದಾಗಿದೆ. ಸಕಾಲಿಕ ಚಿಕಿತ್ಸೆಯಿಂದ ಕಾಯಿಲೆಯನ್ನು ಪೂರ್ಣಪ್ರಮಾಣದಲ್ಲಿ ಗುಣಪಡಿಸಲು ಅವಕಾಶವಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ರೋಗಕ್ಕೆ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಭಿತ್ತಪತ್ರ ಬಿಡುಗಡೆ ಮಾಡಿದರು.
ಸಭೆಯಲ್ಲಿ ಡಾ||ರಘುನಂದನ್, ಡಾ||ನಾಗರಾಜ್, ಡಾ|| ಶಂಕರಪ್ಪ, ಡಾ||ಶ್ರೀಧರ್, ಡಾ||ಶ್ರೀನಿವಾಸ್ ಸೇರಿದಂತೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.