ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ತಕ್ಷಣವೇ ಸಚಿವ ಸಂಪುಟದಲ್ಲಿಟ್ಟು ಸಾರ್ವಜನಿಕ ಚರ್ಚೆಗೆ ತಂದು ಜಾರಿಗೆ ಮುಂದಾಗಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತಿ ಗಣತಿ ವರದಿ ಸರ್ಕಾರದ ಕೈಸೇರಿ ಈಗಾಗಲೇ ತಿಂಗಳುಗಳೇ ಕಳೆದಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ಜಾರಿಗೆ ತರುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಕೇವಲ ಇದು ಬೂಟಾಟಿಕೆಯ ಅಥವಾ ಬಾಯಿಮಾತಿನ ಹೇಳಿಕೆಯಾಗಬಾರದು. ತಕ್ಷಣವೇ ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದರು.


ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯನ್ನು ಕರಾರುವಕ್ಕಾಗಿ ತಿಳಿಸಲು ಮತ್ತು ಮೀಸಲಾತಿಯ ಬಗ್ಗೆ ಕ್ರಮ ಕೈಗೊಳ್ಳಲು ಈ ವರದಿ ಬಹುಮುಖ್ಯವಾಗಿದೆ. ಸುಮಾರು ೧೬೪ ಕೋಟಿ ರೂ. ವೆಚ್ಚದಲ್ಲಿ ಈ ಸಮೀಕ್ಷೆ ಮಾಡಲಾಗಿದೆ. ಈಗ ೭ ವರ್ಷಗಳ ಹಿಂದೆಯೇ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ವರದಿ ಜಾರಿಗೆ ತರುವುದಾಗಿ ಹೇಳಿದ್ದರು. ಆದರೆ, ತಮ್ಮ ಹುದ್ದೆಗೆ ಎಲ್ಲಿ ಕುತ್ತು ಬರುತ್ತದೋ ಎಂದು ಇದನ್ನು ಜಾರಿಗೆ ತಂದಿರಲಿಲ್ಲ. ಈಗಲೂ ಕೂಡ ಮುಡಾ ಹಗರಣ ಹಿನ್ನಲೆಯಲ್ಲಿ ಬೇರೆಡೆ ಗಮನಸೆಳೆಯಲು ಜಾತಿಗಣತಿಯ ವಿಷಯ ಮಾತನಾಡುತ್ತಿದ್ದಾರೆ ಅಷ್ಟೇ. ಆದರೆ, ಇದು ಕೇವಲ ಬೂಟಾಟಿಕೆ ಆಗದೇ ಕಾರ್ಯರೂಪಕ್ಕೆ ತರಬೇಕು ಎಂದರು.


ಮುಖ್ಯಮಂತ್ರಿಗಳು ತಾವು ಹಿಂದುಳಿದ ನಾಯಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಪರಿಶಿಷ್ಟರ ಹಣ ದುರುಪಯೋಗವಾಗುತ್ತಿದೆ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಹಲವರು ಜೈಲಿಗೆ ಹೋಗಿದ್ದಾರೆ. ಹಿಂದುಳಿದ ವರ್ಗಗಳ ಸುಮಾರು ೧೦೭೩ ಯೋಜನೆಗಳಿಗೆ ಬಿಜೆಪಿ ಸರ್ಕಾರದಲ್ಲಿ ಹಣ ನೀಡಲಾಗಿತ್ತು. ಆದರೆ ಆ ಹಣವನ್ನೇ ಈಗ ರದ್ದು ಮಾಡಿದ್ದಾರೆ. ಹೀಗಿರುವಾಗ ನಾನು ಹಿಂದುಳಿದ ಹಾಗೂ ಪರಿಶಿಷ್ಟರ ಪರ ಎಂದು ಮುಖ್ಯಮಂತ್ರಿಗಳು ಹೇಗೆ ಹೇಳುತ್ತಾರೆ. ಈಗಲಾದರೂ ಅವರು ಜಾತಿ ಗಣತಿ ವರದಿಯನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.


ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಸದ್ಯಕ್ಕೆ ಆಗುವ ಸೂಚನೆಗಳು ಕಂಡು ಬರುತ್ತಿಲ್ಲ. ಚುನಾವಣಾಧಿಕಾರಿಗಳು ಇನ್ನು ೧೫ ದಿನದಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದರು. ಆದರೆ ಆ ಬಗ್ಗೆ ಈಗ ಮಾತೇ ಇಲ್ಲ. ಜನ ಗೊಂದಲದಲ್ಲಿದ್ದಾರೆ. ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ದಸರಾ ಹಬ್ಬ ಅಧಿಕಾರಿಗಳ ಕೈಗೆ ಸಿಕ್ಕಂತಾಗಿದೆ. ಸರ್ಕಾರಕ್ಕೆ ಚುನಾವಣೆ ಬೇಡವಾಗಿದೆ. ನಗರದ ಅಭಿವೃದ್ಧಿಗಾಗಿ ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಯಬೇಕು ಎಂದು ಪುನರುಚ್ಛರಿಸಿದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಅವರಿಗೆ ಹೇಳುವಷ್ಟು ನಾನು ದೊಡ್ಡವನಲ್ಲ. ಆದರೆ ಅವರು ನಾನು ಸಾಯುವುದರೊಳಗೆ ಮೋದಿ ಅಧಿಕಾರದಿಂದ ಇಳಿಯುವುದನ್ನು ನೋಡಬೇಕು ಎಂದು ಹೇಳಿದ್ದಾರೆ. ಇದು ನನ್ನ ಮನಸಿಗೆ ನೋವಾಗಿದೆ. ಮೋದಿಯವರು ವಿಶ್ವದಲ್ಲಿಯೇ ಹೆಸರು ಮಾಡಿದವರು. ಹಿಂದೂ ಧರ್ಮದ ಉಳಿವಿಗಾಗಿ ಹೋರಾಡುತ್ತಿದ್ದಾರೆ ಎಂದರು.


ಹಿಂದೂ ಧರ್ಮದ ಬಗ್ಗೆ ಮತ್ತೆ ಮತ್ತೆ ಅವಹೇಳನಕಾರಿಯಾಗಿ ಭಗವಾನ್ ಎಂಬಾತ ಮಾತನಾಡುತ್ತಿದ್ದಾರೆ. ನಾಯ ಬೊಗಳಿದರೆ ಆನೆ ನಡೆಯುವುದನ್ನು ನಿಲ್ಲಿಸುವುದಿಲ್ಲ. ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡುವವರು ಮಾಡುತ್ತಲೇ ಇರಲಿ. ಅಂತಹವರ ಬಗ್ಗೆ ಮಾತನಾಡಲೂ ಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಸತ್ಯಣ್ಣ, ಶಂಕರ್ ನಾಯ್ಕ್, ರಾಜು, ವಾಗೀಶ್, ಕುಬೇಂದ್ರಪ್ಪ, ಶಿವಕುಮಾರ್, ನಾಗರಾಜ್, ಮಂಜುನಾಥ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!