ಶಿವಮೊಗ್ಗ: ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಿರುವ ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಹೇಳಿದರು.


ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ನಿವಾಸದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾತನಾಡಿದ ಅವರು, ಶಿವಮೊಗ್ಗ ಹಬ್ಬ ಒಳ್ಳೆಯ ಅಲೋಚನೆ ಆಗಿದ್ದು, ಉತ್ತಮವಾಗಿ ಆಯೋಜಿಸಿ ಎಂದು ತಿಳಿಸಿದರು.


ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಪ್ರಗತಿಯ ಬಗ್ಗೆ ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.


ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ನೂತನ ಆಡಳಿತ ಮಂಡಳಿಯು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಆಲೋಚನೆ ನಡೆಸಲಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಲಾಗುವುದು ಎಂದು ಹೇಳಿದರು.


ವಿಶೇಷವಾಗಿ ಉದ್ಯಮಿಗಳಿಗೆ ಪ್ರೋತ್ಸಾಹಿಸಲು ಹಾಗೂ ಪ್ರವಾಸೋದ್ಯಮಕ್ಕೆ ಪೂರಕ ಚಟುವಟಿಕೆ ನಡೆಸುವ ದೃಷ್ಟಿಯಿಂದ ಮರ‍್ನಾಲ್ಕು ತಿಂಗಳಲ್ಲಿ ಶಿವಮೊಗ್ಗ ಹಬ್ಬ ಆಯೋಜಿಸಲು ಉದ್ದೇಶಿಸಲಾಗಿದೆ. ಇ-ವೇಸ್ಟ್ ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.


ಮೈಸೂರು ಸಂಸ್ಥಾನದ ರಾಜವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಜಯಚಾಮರಾಜ ಒಡೆಯರ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸನ್ಮಾನಿಸಲಾಯಿತು.


ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಜಂಟಿ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ್, ಲಕ್ಷ್ಮೀದೇವಿ ಗೋಪಿನಾಥ್ , ಪಿ.ರುದ್ರೇಶ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!