ಸಾಗರ : ಗ್ರಾಮಾಂತರ ಪ್ರದೇಶದಲ್ಲಿ ಅಡಿಕೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕದ್ದ ಅಡಿಕೆ, ಆಟೋ ಹಾಗೂ ಮರ ಕಟ್ಟಿಂಗ್ ಮಾಡುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ೨೦೨೩ ಮತ್ತು ೨೦೨೪ನೇ ಸಾಲಿನಲ್ಲಿ ಎರಡು ಅಡಿಕೆ ಕಳವು ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರಾಜ ಆಲಿಯಾಸ್ ಕರಡಿ ಮತ್ತು ರಾಘವೇಂದ್ರ ಆಲಿಯಾಸ್ ರೊಡ್ಡಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಡಿಕೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ ೧.೫ ಲಕ್ಷ ರೂ. ಮೌಲ್ಯದ ಚಾಲಿ ಅಡಿಕೆ, ಅಡಿಕೆ ಸಾಗಾಣಿಕೆಗೆ ಬಳಸಿಕೊಂಡಿದ್ದ ೧ ಲಕ್ಷ ರೂ. ಮೌಲ್ಯದ ಆಟೋ, ೧೦ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ ಮರ ಕೊಯ್ಯುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ
ಸಿಪಿಐ ಮಹಾಬಲೇಶ್ವರ ನಾಯಕ್, ಪಿಎಸ್‌ಐ ಸಿದ್ದರಾಮಪ್ಪ, ಸಿಬ್ಬಂದಿಗಳಾದ ಫೈರೋಜ್ ಅಹ್ಮದ್, ನಂದೀಶ್, ರವಿಕುಮಾರ್, ಪ್ರವೀಣ ಕುಮಾರ್, ಚಾಲಕ ಗಿರೀಶ್, ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯಕುಮಾರ್ ಪಾಲ್ಗೊಂಡಿದ್ದರು.