ಶಿವಮೊಗ್ಗ, ಸೆ .26
   ಕೋಟೆಗಂಗೂರಿನಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೇ ಕೋಚಿಂಗ್ ಟರ್ಮಿನಲ್ ರಾಜ್ಯದಲ್ಲೇ ಮೊದಲನೆಯದಾಗಿದ್ದು, 2026 ರೊಳಗೆ ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದರು.


     ಗುರುವಾರ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನಿರ್ಮಿಸಲಾಗುತ್ತಿರುವ ರೈಲುಗಳನ್ನು ಸ್ವಚ್ಚಗೊಳಿಸುವ ಕೋಚಿಂಗ್ ಟರ್ಮಿನಲ್‌ಗೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿ ಮಾತನಾಡಿದರು.


 ಒಟ್ಟು 74 ಎಕರೆಯಲ್ಲಿ ರೂ.80 ಕೋಟಿ ವೆಚ್ಚದಲ್ಲಿ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗುತ್ತಿದೆ. ರೈಟ್ಸ್(RITES) ಸಂಸ್ಥೆಯು ಕಾಮಗಾರಿ ನಡೆಸುತ್ತಿದೆ. ರೈಟ್ಸ್ ಸಂಸ್ಥೆಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿದ್ದು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಹಾಗೂ ಕಾಮಗಾರಿಯು ಗುಣಮಟ್ಟದಿಂದ ಕೂಡಿರುವಂತೆ ನಿರ್ವಹಿಸಬೇಕೆಂದು ನಿರ್ದೇಶಕರಿಗೆ ಸೂಚನೆ ನಿಡಿದ್ದೇನೆ.


 ಇಲ್ಲಿ ಟರ್ಮಿನಲ್ ಆಗುವುದರಿಂದ ರಾಜ್ಯ ಎಲ್ಲ ರೈಲುಗಳು ಇಲ್ಲಿ ಸ್ವಚ್ಚತೆಗಾಗಿ ಬರಲಿವೆ. ಇಲ್ಲಿ ಡಿಪೋ ಆಗುವುದರಿಂದ ವಂದೇ ಭಾರತ್ ರೈಲು ಸಹ ಬರಲಿದೆ. ಟರ್ಮಿನಲ್ ನಿರ್ಮಾಣದಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ. ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಮತ್ತು ಗುಣಮಟ್ಟವನ್ನು ಪರಿಶೀಲಿಸಲು ರೈಲ್ವೇ ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಎಲ್ಲರೂ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲು ಸಹಕರಿಸಬೇಕೆಂದರು.


 ಶಿಕಾರಿಪುರ-ಶಿರಾಳಕೊಪ್ಪ-ರಾಣೆಬೆನ್ನೂರು ರೈಲ್ವೆಗೆ ರೈತರಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲಸಗಳು ನಡೆಯುತ್ತಿವೆ. ಸಂಸದರು ಜಿಲ್ಲೆಯಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದ ಅವರು ರೈಲ್ವೆ ಇಲಾಖೆ ಐತಿಹಾಸಿಕ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಡಬ್ಲಿಂಗ್, ಎಲೆಕ್ಟಿçಫಿಕೇಷನ್ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯ ಕೈಗೊಂಡಿದೆ. ರಾಜ್ಯದಲ್ಲಿ ಒಟ್ಟು ರೂ. 45 ಸಾವಿರ ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.


ರೈತರು-ಜಾನುವಾರು ಓಡಾಟಕ್ಕೆ ರಸ್ತೆ: ಈ ಭಾಗದ ರೈತರು, ಸ್ಥಳೀಯರು ಇಲ್ಲಿ ಆಚೆ ಕಡೆ ಓಡಾಡಲು ರಸ್ತೆ ಬೇಕೆಂದು ಮನವಿ ಮಾಡಿದ್ದು, ಜನ-ಜಾನುವಾರು ಓಡಾಡಲು ಅನುಕೂಲವಾಗುವಂತೆ ಆರ್‌ಓಬಿ ನಿರ್ಮಿಸಲು ಸೂಚಿಸಿದ್ದೇನೆ. ಹಾಗೂ ದೇವಸ್ಥಾನಕ್ಕೆ ಹೋಗಲು ದಾರಿ ಕೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.


    ಹಾಗೂ ಹಿಂದೆ ರೈಲ್ವೆ ಲೈನ್ ನಿರ್ಮಿಸಿದಾಗ ರೈತರಿಗೆ ಪರಿಹಾರ ಒದಗಿಲ್ಲ. ಒದಗಿಸುವಂತೆ ಕೋರಿದ್ದು, ರೈತರು ದಾಖಲಾತಿ ನೀಡಿದಲ್ಲಿ ಕಂದಾಯ ಮತ್ತು ರೈಲ್ವೇ ಇಲಾಖೆಯೊಂದಿಗೆ ಮಾತನಾಡುತ್ತೇನೆ ಎಂದರು.


 ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಸ್ತುತ ಟರ್ಮಿನಲ್‌ನಲ್ಲಿ ಶೇ.25 ರಷ್ಟು ಕೆಲಸ ಆಗಿದೆ. ಕೆಲಸ ಶೀಘ್ರಗತಿಯಲ್ಲಿ ಆಗಬೇಕು. ಡಿಸೆಂಬರ್ ಒಳಗೆ ಪಿಟ್‌ಲೈನ್ ಆಗಬೇಕು ಎಂದರು.
    ಈ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಭಾರತಿ ಶೆಟ್ಟಿ, ಧನಂಜಯ ಸರ್ಜಿ ಮಾಜಿ ಪಾಲಿಕೆ ಸದಸ್ಯ ಕಿರಣ್, ರೈಲ್ವೇ ಅಧಿಕಾರಿಗಳು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!