ಶಿವಮೊಗ್ಗ,ಸೆ.೨೫: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯು ಶ್ರೀಶನೈಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್, ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕಟದ ಸಹಕಾರದೊಂದಿಗೆ ಸೆ.೨೭,೨೮ ಮತ್ತು ೨೯ರಂದು
ಪ್ರತಿದಿನ ಸಂಜೆ ೬ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ “ಭಗವದ್ಗೀತೆಯ ವಿಶ್ವರೂಪ ದರ್ಶನ” ದಿವ್ಯಸತ್ಸಂಗ, ಪ್ರವಚನ ಹಾಗೂ ಸಾಮೂಹಿಕ ಧ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಶ್ರೀಧರ ಶ್ರೀಗುಡ್ಡ ಹಾಗೂ ಆತ್ಮಸಂಶೋಧನಾ ಕೇಂದ್ರದ ಸಂಸ್ಥಾಪಕರು, ಆಧ್ಯಾತ್ಮ ಚಿಂತಕರಾದ ಪೂಜ್ಯ ಗುರುಮಾತಾ ಅಮ್ಮ ಅವರು ಗೀತಾ ಸೂಕ್ಷ್ಮ ದರ್ಶನ, ನಿತ್ಯ ಜೀವನದಲ್ಲಿ ಗೀತಾನುಷ್ಠಾನದ ಬಗ್ಗೆ ಪ್ರವರ್ಚನ ನೀಡಲಿದ್ದಾರೆ ಎಂದರು.
೧೯೯೬ರಲ್ಲಿ ಬೆಂಗಳೂರಿನ ಕೆಂಗೇರಿ ಸಮೀಪ ಆರಂಭವಾದ ಅಮ್ಮನವರ ಆತ್ಮ ಸಂಶೋಧನಾ ಕೇಂದ್ರವಾದ ಶ್ರೀಧರ ಶ್ರೀಗುಡ್ಡವು ಇದುವರೆಗೂ ಸಹಸ್ರಾರು ಭಕ್ತಾಧಿಗಳಿಗೆ ಯೋಗಾಭ್ಯಾಸ, ಪ್ರಣಾಯಾಮ ಹಾಗೂ ಧ್ಯಾನ ಶಿಬಿರ ನಡೆಸಿಕೊಂಡು ಬರಲಾಗುತ್ತಿದ್ದು, ಇದೊಂದು ಶಕ್ತಿಪೀಠವಾಗಿ ಮಾರ್ಪಟ್ಟಿದೆ. ಈ ಕೇಂದ್ರವು ಕೇವಲ ಭಾರತಕ್ಕೆ ಸೀಮಿತವಾಗಿರದೆ ವಿವಿಧ ದೇಶಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಅಲ್ಲಿಯೂ ಕೂಡ ಅನೇಕ ಧ್ಯಾನ ಶಿಬಿರಗಳು, ಪ್ರವಚನ ಮಾಲಿಕೆ ಮತ್ತು ಉಪನ್ಯಾಸಗಳನ್ನು ನಡೆಸಿಕೊಂಡು ಬಂದಿರುತ್ತಾರೆ ಎಂದರು.
ಶ್ರೀಚಕ್ರ ಆರಾಧನೆಯನ್ನು ಅತಿಸುಲಭ ಹಾಗೂ ಸರಳ ರೀತಿಯಲ್ಲಿ ತಮ್ಮ ಶಿಷ್ಯರಿಗೆ ಭೋಧಿಸುತ್ತ ಬಂದಿರುವ ಗುರುಮಾತ ಅಮ್ಮನವರು ಶ್ರೀಲಲಿತಾ ಸಹಸ್ರಾನಾಮ, ಶ್ರೀಲಲಿತಾ ತ್ರಿಶತಿ, ಸೌಂದರ್ಯ ಲಹರಿಗಳಂತಹ ಕ್ಲಿಷ್ಟ ಸರ್ವಗಳಿಗೂ ಸೂಕ್ಷ್ಮಾರ್ಥವನ್ನು ಆಸಕ್ತರಿಗೆ ಮನಮುಟ್ಟುವಂತೆ ನೂರಾರು ಶಿಬಿರಗಳಲ್ಲಿ ತಿಳಿಸುತ್ತಾ ಬಂದಿದ್ದಾರೆ ಎಂದರು.
ಸೆ.೨೭ರ ಸಂಜೆ ೬ಕ್ಕೆ ಶ್ರೀಆದುಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಶ್ರೀ ಸಾಯಿನಾಥ ಸ್ವಾಮೀಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಭದ್ರಾವತಿ ಕ್ಷೇತ್ರದ ಶಾಸಕರು ಹಾಗೂ ಕೆ.ಆರ್.ಐ.ಡಿ.ಎಲ್ನ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧ ಸಂಸ್ಥೆಯ ಪ್ರಮುಖರಾದ ಸುವರ್ಣ ಶಂಕರ್, ಈ.ವಿಶ್ವಾಸ್, ಬಾಲು, ಮೋಹನ್ರಾವ್ ಜಾದವ್, ಮಮತಾ ಪ್ರಸಾದ್, ಸುಧೀಂದ್ರ ಕಟ್ಟೆ, ನಾಗರಾಜ್, ರಾಜಣ್ಣ, ಮಾಲಾ ರಾಮಪ್ಪ, ಶಶಿಕಲಾ ಪ್ರಶಾಂತ್ ಇದ್ದರು.