ಸಾಗರ(ಶಿವಮೊಗ್ಗ),ಸೆ,೧೪:ಗಣೇಶೋತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆಗಳ ಕುರಿತು ಮುಂಜಾಗೃತಾ ಕ್ರಮದ ಪರಿಣಾಮ ಅಪರಾಧಿಗಳಿಗೆ ಎಚ್ಚರಿಕೆ ಹಾಗೂ ಹಬ್ಬಗಳ ಸಂಭ್ರಮಗಳಿಗೆ ಭರವಸೆ ಮೂಡಿಸಲು ರಕ್ಷಣಾ ಇಲಾಖೆಯಿಂದ ಕೆಎಸ್ಆರ್ಪಿ ತುಕಡಿ ಸಹಿತ ಪಥ ಸಂಚಲನ ನಡೆಸಿದ್ದೇವೆ ಎಂದು ಸಾಗರದ ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಪ್ಪ ನಾಯಕ್ ಹೇಳಿದರು.


ಅವರು ಮಾದ್ಯಮದವರೊಂದಿಗೆ ಮಾತನಾಡಿ ಸಾಗರ ಪಟ್ಟಣದ ಶಿವಪ್ಪನಾಯಕ ನಗರ ಹಾಗೂ ಜನ್ನತ್ನಗರ ಮತ್ತು ಪಟ್ಟಣದ ಬಿ.ಹೆಚ್.ರಸ್ತೆ,ಅಶೋಕ ರಸ್ತೆ ಸೇರಿದಂತೆ ಪೊಲೀಸ್ ಪಥಸಂಚಲನ ನಡೆಸಿದ್ದೇವೆ ಎಂದರು.
ಸಾಗರ ತಾಲ್ಲೂಕಿನಲ್ಲಿ ಆಡಳಿತದ ಏಕಗವಾಕ್ಷಿ ವ್ಯವಸ್ಥೆಯಲ್ಲಿ ೩೭೦ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪರವಾನಿಗೆ ಪಡೆದು ಗಣೇಶೋತ್ಸವ ಆಚರಣೆ ಮಾಡಿದ್ದಾರೆ.ಸಾಗರ ಪಟ್ಟಣದಲ್ಲಿ ೪೦ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಿದರೇ ಆನಂದಪುರಂ ಹೋಬಳಿಯಲ್ಲಿ ೧೩೦ ಸಾರ್ವಜನಿಕ ಗಣಪತಿ ಸ್ಥಾಪಿಸಿದ್ದಾರೆ.ಕಾರ್ಗಲ್ ವ್ಯಾಪ್ತಿ ೬೭ ಸೇರಿದಂತೆ ವಿವಿಧ ಹೋಬಳಿ ಮಟ್ಟದಲ್ಲಿಯೂ ಗಣೇಶೋತ್ಸವ ಶಾಂತಿಯಿಂದ ನೆರವೇರಿದೆ ಎಂದರು.

ಶುಕ್ರವಾರದವರೆಗೆ ೩೪೯ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಗಣೇಶನ ಮೂರ್ತಿಗಳ ವಿಸರ್ಜನೆ ಜರುಗಿದ್ದು,ಶನಿವಾರ ೩ ಗಣೇಶನ ಮೂರ್ತಿಗಳು ವಿಸರ್ಜನೆಗೊಳ್ಳುತ್ತಿವೆ ಎಂದರು.
ನಮಗೆ ಪ್ರಮುಖವಾಗಿ ಸಾಗರದಲ್ಲಿ ಶಿವಪ್ಪನಾಯಕ ಯುವಜನ ಸಂಘದ ಗಣೇಶನ ವಿಸರ್ಜನಾಪೂರ್ವ ಮೆರವಣಿಗೆಗೆ ಹೆಚ್ಚಿನ ಜನಸಂಖ್ಯೆ ಸೇರುವ ಕಾರಣ ಸೆ.೧೬ ರಂದು ಸೋಮವಾರ ವಿಶೇಷ ಬಂದೋಬಸ್ತ್ ವ್ಯವಸ್ಥೆಗೆ ಕ್ರಮವಹಿಸಲಾಗಿದ್ದು,೨೦೦ ಪೊಲೀಸರು ೮೦ ಹೋಮ್ಗಾರ್ಡ್ಗಳು,ತೀರ್ಥಹಳ್ಳಿಯಿಂದ ೬೦ ಪೊಲೀಸರು ಹಾಗೂ ಕೆಎಸ್ಆರ್ಪಿ ಸೇರಿದಂತೆ ಅಧಿಕಾರಿಗಳು ಸಜ್ಜಾಗಿದ್ದಾರೆ ಎಂದರು.
ಸೆ.೧೮ ರಂದು ಸಾಗರದ ಪ್ರಮುಖ ಗಣಪತಿ ಜನ್ನತ್ನಗರದ ಜೈಭುವನೇಶ್ವರಿ ಸಂಘದ ಗಣೇಶೋತ್ಸವ ವಿಸರ್ಜನಾಪೂರ್ವ ಮೆರವಣಿಗೆಗೆ ವಿಶೇಷ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ.ನಗರದ ಮೆರವಣಿಗೆ ಮಾರ್ಗಗಳಲ್ಲಿ ಸಂಪೂರ್ಣ ಕಣ್ಗಾವಲು ಪ್ರಯುಕ್ತ ಸಿಸಿ ಕ್ಯಾಮೆರಾಗಳ ಅಳವಡಿಸಿದೆ.ಡ್ರೋಣ್ ನಿಗಾವಹಿಸುತ್ತಿದೆ ಎಂದರು.


ಕೆಎಸ್ಆರ್ಪಿ ತುಕಡಿ ೧೩೦ ಸಿಬ್ಬಂದಿಗಳ ಜೊತೆಗೆ ಆರ್ಎಎಫ್ನ೭೫ ಸಿಬ್ಬಂದಿಗಳು,೪೦೦ ಪೊಲೀಸರು,ಸಬ್ಇನ್ಸ್ಪೆಕ್ಟರ್ಗಳು,ಇನ್ಸ್ಪೆಕ್ಟರ್ಗಳು ಹಾಗೂ ಹೋಮ್ಗಾರ್ಡ್ಗಳ ಸಹಿತ ೧೦೦೦ ಅಧಿಕಾರಿ ಸಿಬ್ಬಂಧಿಗಳ ಮೂಲಕ ಬಿಗಿಬಂದೋಬಸ್ತ್ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಈದ್ ಮಿಲಾದ್ ಪ್ರಯುಕ್ತ ಕಳೆದ ವರ್ಷ ನಡೆದ ಕೆಲವು ಘಟನಾ ಸ್ಥಳಗಳನ್ನು ಹೊರತುಪಡಿಸಿ ಉಳಿದ ಮಾರ್ಗಗಳಲ್ಲಿ ಮೆರವಣಿಗೆ ಹೋಗಲು ಅವಕಾಶ ಕಲ್ಪಿಸಿದೆ.ಕೇವಲ ಒಂದು ಧ್ವನಿವರ್ಧಕ ಹಾಗೂ ೮-೧೦ ಮೌತ್ಪೀಸ್ಗಳ ಉಪಯೋಗಿಸಿ ಪ್ರಾರ್ಥನೆ ಮೂಲಕ ಮೆರವಣಿಗೆ ಸಾಗಲು ಅವಕಾಶ ಕಲ್ಪಿಸಲಾಗಿದೆ.ಎಲ್ಲಾ ಮೆರವಣಿಗೆಗಳು ನಿಯಮಗಳ ಪಾಲನೆ ಮಾಡಬೇಕು ಎಂದು ಸೂಚಿಸಿದರು.

ಅಪರಾಧಿಗಳು ಮತ್ತು ವ್ಯಸನಿಗಳಿಗೆ ಖಡಕ್ ಎಚ್ಚರಿಕೆ
ಗಣೇಶೋತ್ಸವ ಮತ್ತು ಈದ್ಮಿಲಾದ್ ಹಬ್ಬಗಳ ಪ್ರಯುಕ್ತ ಕೆಲವು ಪ್ರಕರಣಗಳಿರುವ ವ್ಯಕ್ತಿಗಳನ್ನು ಕರೆಯಿಸಿ ಸೂಚನೆಗಳನ್ನು ನೀಡಿದ್ದೇವೆ.ಮೆರವಣಿಗೆ ಹಾಗೂ ಗಲಾಟೆಗಳ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಾರದು.ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘನೆಯಂತಹ ಪ್ರಕರಣಗಳಿಗೆ ಕಾರಣರಾಗಬರದು ಎಂದು ಸೂಚಿಸಿದ್ದೇವೆ ಎಂದರು.
ಗಾಂಜಾ ಹಾಗೂ ಮದ್ಯಪಾನ ವ್ಯಸನಿಗಳು ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಬೆದರಿಕೆ ಹಾಕುವುದು ಮಾನಹಾನಿಕರ ನಡವಳಿಕೆ ಪ್ರದರ್ಶನ ನಡೆಸಿದರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ.ಮೊನ್ನೆ ಒಬ್ಬ ಆರೋಪಿ ಕಾನೂನುಭಂಗ ಕೃತ್ಯ ಎಸಗಿರುವ ಕಾರಣ ತಕ್ಷಣ ಪೊಲೀಸರು ಕ್ರಮವಹಿಸಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಯುವಕರು ವಿದ್ಯಾರ್ಥಿ ವ್ಯಸನಿಗಳಾಗಿ ಪ್ರಕರಣದಲ್ಲಿ ಸಿಲುಕಿಕೊಂಡಲ್ಲಿ ಜೀವನದಲ್ಲಿ ಉದ್ಯೋಗ ಹಾಗೂ ಪಾಸ್ಪೋರ್ಟ್ ಪಡೆಯಲು ಪೊಲೀಸರ ನಿರಾಪೇಕ್ಷಣ ಪತ್ರ ದೊರೆಯುವುದಿಲ್ಲ ಎಚ್ಚರ ಎಂದು ಪೋಷಕರಿಗೂ ಸಂದೇಶ ನೀಡಿದರು.
ಮತ್ತಿನಲ್ಲಿ ನಡೆದ ಘಟನೆ ಕ್ಷಮಿಸಿ ಎಂದು ಅಂಗಲಾಚಿದರೂ ಪ್ರಕರಣದಿಂದ ಮುಕ್ತರಾಗಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ಪೊಲೀಸರ ಸೂಚನೆಗೆ ಬೆಲೆ ನೀಡದ ರೌಡಿಶೀಟರ್ಗಳ ವಿರುದ್ಧ ಗಡಿಪಾರು ಕ್ರಮ
ಗಣೇಶೋತ್ಸವ ಮತ್ತು ಈದ್ಮಿಲಾದ್ ಪ್ರಯುಕ್ತ ಪೂರ್ವಭವಿಯಾಗಿ ಮುನ್ನಚ್ಚರಿಕೆ ಕ್ರಮವಾಗಿ ಗಂಭೀರ ಅಪರಾಧ ಪ್ರಕರಣಗಳಿರುವ ಸುಮಾರು ೯೦ ಕ್ಕೂ ಹೆಚ್ಚು ಜನರಿಗೆ ಪೊಲೀಸರು ಸೂಚನೆ ನೀಡಿದರು ಠಾಣೆಗೆ ಆಗಮಿಸದೇ ನಿರ್ಲಕ್ಷ್ಯವಹಿಸಿರುವ ಅಪರಾಧಿ ಪಟ್ಟಿಯಲ್ಲಿರುವ ವ್ಯಕ್ತಿಗಳ ಹೆಸರುಗಳನ್ನು ತಹಶೀಲ್ದಾರರು ಮತ್ತು ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.