
ಶಿವಮೊಗ್ಗ: ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಈ ಬಾರಿ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡಕೂಡದು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಜಿಲ್ಲಾ ಘಟಕ ಕಾರ್ಯಕರ್ತರು ಶನಿವಾರ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ದರ್ಗಾ ಬಳಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಇತ್ತೀಚೆಗೆ ನಡೆದ ಕಲ್ಲು ತೂರಾಟ ಘಟನೆಯಿಂದ ಹಿಂದೂ ಸಮಾಜ ಆತಂಕಗೊಂಡಿದೆ. ಇಲ್ಲಿ ನಿಷೇಧಿತ ಇಸ್ಲಾಂ ಸಂಘಟನೆಗಳು ಕೋಮು- ಸೌಹಾರ್ದ ಕದಡುವ ದೃಷ್ಠಿಯಿಂದ ಕಲ್ಲು ತೋರಾಟ ಮಾಡಿರುವ ಬಗ್ಗೆ ಅನುಮಾನವಿದೆ.

ಆದ್ದರಿಂದ, ಶಿವಮೊಗ್ಗದಲ್ಲೂ ಈ ರೀತಿ ಘಟನೆಗಳು ನಡೆಯುವ ಆತಂಕ ವ್ಯಕ್ತವಾಗುತ್ತಿದೆ. ಆದ್ದರಿಂದ, ಇಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯ ಇದೆ ಎಂದು ಮನವಿಯಲ್ಲಿ ತಿಳಿಸಿದರು.

ಕಳೆದ ಬಾರಿ ರಾಗಿಗುಡ್ಡದಲ್ಲಿ ಕೋಮು- ಸೌಹಾರ್ದ ಕದಡುವ ಹುನ್ನಾರ ನಡೆಸಲಾಗಿತ್ತು. ಈ ಘಟನೆಯಿಂದ ಹಿಂದುಗಳ ಮನದಲ್ಲಿ ಭಯದ ಆತಂಕ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಈ ಬಾರಿ ಈ ರೀತಿಯ ಘಟನೆಗಳು ಮರುಕಳಿಸಕೂಡದು ಎಂದರೆ, ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು.

ಪ್ರಮುಖರಾದ ಸುರೇಶ್ ಬಾಬು, ರಾಜೇಶ್ ಗೌಡ, ಅಂಕುಶ್, ನಾಗೇಶ್, ಅರ್ಜುನ್ ಇದ್ದರು.