ಶಿವಮೊಗ್ಗ, ಸೆಪ್ಟಂಬರ್ 05; : ಹಿರಿಯರ ಅನುಭವಗಳು ಇಂದಿನ ನಾಗರಿಕ ಸಮಾಜಕ್ಕೆ ನಿಜವಾದ ಮಾರ್ಗದರ್ಶನವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ.ಎಸ್ ಅವರು ತಿಳಿಸಿದರು.
ಅವರು ನೆಹರು ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಸರ್ಕಾರಿ ನಿವೃತ ನೌಕರರ ಸಂಘ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರೀಕರಿಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ನಾಗರಿಕರ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಎರಡು ವಿಶೇಷ ಅವಿಸ್ಮರಣೀಯ ಕಾರ್ಯಕ್ರಮಗಳು ಇಂದು ನಡೆಯುತ್ತಿದ್ದು, ಒಂದು ಅಕ್ಷರವನ್ನು ಕಲಿಸಿದ ವ್ಯಕ್ತಿಯೂ ಕೂಡ ಗುರು ಸ್ಥಾನದಲ್ಲಿ ನೋಡುತ್ತೇವೆ. ತಂದೆ ತಾಯಿ ಮಕ್ಕಳಿಗೆ ಮೊದಲ ಗುರುವಾಗಿದ್ದಾರೆ. ಅವರ ಹಾಕಿಕೊಟ್ಟ ನೈತಿಕ ಮೌಲ್ಯಗಳ ಮೇಲೆ ಇಂದು ನಾವುಗಳು ಉನ್ನತಸ್ಥಾನದಲ್ಲಿ ಜೀವಿಸುತ್ತಿದೇವೆ. ಹಿರಿಯರು ನೀತಿ ನಿಯತ್ತು ಮತ್ತು ಮೌಲ್ಯಗಳ ಆಧಾರದ ಮೇಲೆ ಜೀವನ ನಡೆಸುತ್ತಿದ್ದರು. ಕಾನೂನಿನ ಅರಿವು ಅವರಿಗೆ ಇರಲಿಲ್ಲ ಆದರೆ ಪ್ರತಿಯೊಬ್ಬರನ್ನು ಗೌರದಿಂದ ಕಾಣುತ್ತಿದ್ದರು. ಇಂದು ಅದು ಬದಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಂದಿನ ಸಮಾಜದಲ್ಲಿ ನೀತಿ ಮತ್ತು ಮೌಲ್ಯಗಳು ಕುಸಿತ ಕಂಡಿದ್ದು ಅಧುನಿಕ ಯುಗದಲ್ಲಿ ತಂತ್ರಜ್ಞಾನಗಳ ಬೆಳವಣಿಗೆಯಿಂದ ನಾವು ನಮ್ಮ ಮನೆಯ ಹಿರಿಯರನ್ನು ಕಡೆಗಣಿಸುತ್ತಿದ್ದೇವೆ. ಅವರ ಅನುಭವದ ಮಾತುಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ. ನಾವು ಮುಂದೆ ಹಿರಿಯರಾದಾಗ ನಮ್ಮ ಮಕ್ಕಳು ನಮ್ಮ ನೋಡುವ ರೀತಿ ಬದಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರಕವಾಗಲಿದೆ. ಹಿರಿಯ ನಾಗರಿಕರು ನಮ್ಮ ಸಮಾಜದ ಗೌರವಯುತ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿಗಳಾಗಿದ್ದಾರೆ. ಅವರ ಅನುಭವ, ಜ್ಞಾನ ಇಂದಿನ ಸಮಾಜಕ್ಕೆ ಅತ್ಯಂತ ಪೂರಕವಾಗಿದೆ. ಅವರ ಅನುಭವದ ಮಾತುಗಳನ್ನು ನಾವು ಕೇಳಬೇಕು ಮತ್ತು ಪಾಲಿಸಬೇಕು ಎಂದರು
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಪ್ಪ ಮಾತನಾಡಿ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡರೆ ಜೀವನ ಸುಧಾರಣೆ ಆಗುತ್ತದೆ. ಹಿರಿಯ ನಾಗರಿಕರಿಗೆ ರಕ್ಷಣೆ ಮಾಡುವ ಕೆಲಸವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಸರ್ಕಾರ ಹಿರಿಯ ನಾಗರಿಕರ ರಕ್ಷಣೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸಿ ಅವರನ್ನು ಗೌರವಿಸುವ ಕೆಲಸಗಳು ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಉಪ ನಿರ್ದೇಶಕರಾದ ಉಮೇಶ್ ಹೆಚ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿರೇಖಾ, ನಿವೃತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ವೃದ್ಧಾಶ್ರಮದ ವಿವಿಧ ಸ್ವಯಂ ಸೇವಾ ಸಂಘಟನೆಯ ಸದಸ್ಯರು ಹಿರಿಯ ನಾಗರಿಕರು ಉಪಸ್ಥಿತರಿದ್ದರು.
——————–