ಶಿವಮೊಗ್ಗ,ಸೆ.2:
ರಾಜ್ಯದಲ್ಲಿ ಎಲ್ಲರೂ ಅರ್ಥಹೀನ ರಾಜಕಾರಣ ಮಾಡುತ್ತಿದ್ದು, ಅಸಹ್ಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರ ಹುದ್ದೆಗೆ ತನ್ನದೇ ಆದ ಘನತೆ ಇದೆ. ರಾಜ್ಯಪಾಲರನ್ನು ಅವಮಾನ ಮಾಡುವುದು ಎಷ್ಟರಮಟ್ಟಿಗೆ ಸರಿ. ಸಿದ್ಧರಾಮಯ್ಯ ಅವರಿಗೆ ತನಿಖೆಗೆ ಆದೇಶ ನೀಡಿದ್ದಾರೆ ಎಂಬ ವಿಷಯವನ್ನು ಇಟ್ಟುಕೊಂಡು ರಾಜಭವನ ಚಲೋ ಮಾಡುವುದು ಎಷ್ಟರಮಟ್ಟಿಗೆ ಸರಿ? ಅಲ್ಲದೇ ರಾಜ್ಯಪಾಲರ ಭಾವಚಿತ್ರವನ್ನು ಸುಟ್ಟು ಹಾಕುವುದು ಅವಹೇಳನಕಾರಿಯಾಗಿ ಮಾತನಾಡುವುದು ಸಂವಿಧಾನ ವಿರೋಧಿಯಲ್ಲವೇ? ಇದು ಕಾಂಗ್ರೆಸ್‍ನ ಅಸಹ್ಯಕರ ಮತ್ತು ಅರ್ಥಹೀನ ರಾಜಕಾರಣ ಮಾಡುತ್ತಿದ್ದಾರೆ, ಎಲ್ಲರೂ ಇದನ್ನೇ ಮಾಡುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಕಾಂಗ್ರೆಸ್ ನವರು ಆರೋಪಿಸುತ್ತಿರುವಂತೆ ರಾಜ್ಯಪಾಲರ ಬಳಿ ಯಾವುದೇ ದೂರುಗಳ ಬಗ್ಗೆ ಕಡತಗಳು ಇಲ್ಲ. ಹೆಚ್.ಡಿ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದಂತೆ ಲೋಕಾಯುಕ್ತದಿಂದ ದೂರುಗಳು ಇಲ್ಲ. ಯಾವುದೇ ಕಡತ ಇಲ್ಲದಿದ್ದರೂ ರಾಜ್ಯಪಾಲರು ಇವುಗಳನ್ನು ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ನವರು ಬೊಬ್ಬೆ ಬಿಡುತ್ತಿದ್ದಾರೆ ಅಷ್ಟೇ. ಈಗಾಗಲೇ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಕೂಡ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ. ರಾಜ್ಯಪಾಲರ ಬಳಿ ಯಾವುದೇ ಕಡತಗಳಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಅವರ ಫೈಲ್ ವೊಂದಿತ್ತು. ಅದು ಕೂಡ ರಾಜ್ಯಪಾಲರು ಲೋಕಾಯುಕ್ತಕ್ಕೆ ವಾಪಸ್ ಕಳಿಸಿದ್ದಾರೆ ಎಂದು ಹೇಳಿದ್ದಾರೆ. ಹೀಗಿರುವಾಗ ಕಾಂಗ್ರೆಸ್‍ನವರು ರಾಜ್ಯಪಾಲರ ಬಗ್ಗೆ ಸಲ್ಲದ ಮಾತನಾಡುತ್ತಿರುವುದು ಸರಿಯಲ್ಲ ಎಂದರು.
ರಾಜ್ಯಪಾಲರ ಬಳಿ ಕಾಂಗ್ರೆಸ್ ನಾಯಕರು ಹೋದಾಗ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಕುರಿತು ನೀವು ಒಳಗೆ ಬರುವ ಹಾಗಿಲ್ಲ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಅವರು ರಾಷ್ಟ್ರದ್ರೋಹದ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಯಾವ ಅಂಜಿಕೆಯೂ ಇಲ್ಲವಾಗಿದೆ. ಐವಾನ್ ಡಿಸೋಜ ಅವರನ್ನು ಕೂಡಲೇ ರಾಷ್ಟ್ರದ್ರೋಹದ ಆರೋಪದ ಹಿನ್ನಲೆಯಲ್ಲಿ ಬಂಧಿಸಬೇಕು. ಅಲ್ಲದೇ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ಈ ಎಲ್ಲಾ ಘಟನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.
ಮಹಿಳೆಯೊಬ್ಬರು ರಾಜಕಾರಣಕ್ಕೆ ಬರುವುದು ಬಹುಕಷ್ಟವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕಿ ಸಿಮಿ ಎಂಬುವವರು ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕಾರಣದಲ್ಲಿ ಮಹಿಳೆಯೊಬ್ಬರು ಅವಕಾಶ ಪಡೆಯಬೇಕಾದರೆ ಸಿನಿಮಾ ಕ್ಷೇತ್ರದಲ್ಲಿ ಇರುವಂತೆ ಅಲ್ಲಿನ ನಾಯಕರ ಜೊತೆ ಸಂಬಂಧವಿಟ್ಟುಕೊಳ್ಳಬೇಕು. ಇಂತಹ ಪರಿಸ್ಥಿತಿ ಮಹಿಳೆಯರಿಗೆ ಬಂದಿದೆ. ಇದು ಕಾಂಗ್ರೆಸ್ ಪಕ್ಷದಲ್ಲೂ ಇದೆ ಎಂದು ಧೈರ್ಯವಾಗಿ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಅವರ ಹೇಳಿಕೆಯನ್ನು ವಿಮರ್ಶೆ ಮಾಡುವುದನ್ನು ಬಿಟ್ಟು ಪಕ್ಷದಿಂದಲೇ ಉಚ್ಚಾಟನೆ ಮಾಡಿರುವುದು ಸರಿಯಲ್ಲ ಎಂದರು.
ರಾಷ್ಟ್ರ ಭಕ್ತರ ಬಳಗವು ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಹೋರಾಡ ನಡೆಸಿತ್ತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಡೀ ರಾಜ್ಯಾದ್ಯಂತ ವಿದ್ಯಾರ್ಥಿವೇತನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಹಾಗೆಯೇ ಆಶ್ರಯ ಮನೆಗಳ ವಿತರಣೆಯಾಗಬೇಕು. ಮತ್ತು ಸರ್ಕಾರ ಮಾತು ಕೊಟ್ಟಂತೆ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ರೂ. ತಕ್ಷಣವೇ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ವಿಶ್ವಾಸ್, ಶ್ರೀಕಾಂತ್, ಬಾಲು, ವಾಗೀಶ್, ಶಿವಕುಮಾರ್, ಜಾಧವ್, ಚನ್ನಬಸಪ್ಪ, ಚಿದಾನಂದ, ಮುತ್ತು ಸೇರಿದಂತೆ ಹಲವರಿದ್ದರು.