ಶಿವಮೊಗ್ಗ: ಮಲೆನಾಡಿನ ಜೀವನದಿಯಾದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವುದು ಅವೈಜ್ಞಾನಿಕವಾಗಿದ್ದು, ಇದನ್ನು ಕೈ ಬಿಡಬೇಕು ಎಂದು ಆನಂದಪುರಂ ಬೆಕ್ಕಿನ ಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಆಗ್ರಹಿಸಿದರು.
ನಗರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಗುರು ಬಸವ ಅಧ್ಯಯನ ಪೀಠ ಬೆಕ್ಕಿನಕಲ್ಮಠದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಆತಿಥ್ಯದೊಂದಿಗೆ ಹಮ್ಮಿಕೊಂಡಿದ್ದ ಶ್ರಾವಣ ಚಿಂತನ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ಕಳೆದ 45 ವರ್ಷಗಳಿಂದ ಶ್ರಾವಣ ಮಾಸ ಆಚರಣೆಯನ್ನು ನಡೆಸಿಕೊಂಡು ಬರುತ್ತಿದೆ. ಸ್ಮರಣೀಯ ಸಾಧಕರು, ಮೌಲಿಕ ಚಿಂತನಾ ಉಪನ್ಯಾಸ ಮಾಲಿಕೆಯು ಮನೆ-ಮನಗಳಲ್ಲಿ ಇಂತಹ ಶ್ರಾವಣ ಚಿಂತನ ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ಅವಶ್ಯಕತೆ ಇದೆ ಎಂದು ಹೇಳಿದರು.
ಅಂತರಂಗ ಶುದ್ಧಿಗೋಸ್ಕರ ಚಿಂತೆನಗಳು, ಕೀರ್ತನೆಗಳು,ಪುರಾಣ, ಪುಣ್ಯ ಕತೆಗಳನ್ನು ಈ ಮಾಸದಲ್ಲಿ ಹೇಳುವ ಮತ್ತು ಕೇಳುವ ರೂಢಿ ಬಹಳಷ್ಟು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಸದ್ವಿಚಾರಗಳನ್ನು ಮೈ-ಮನಗಳಿಗೆ ತುಂಬುವ ಮೂಲಕ ಆಂತರ್ಯದ ಕಲ್ಮಶವನ್ನು ತೊಳೆಯುವ ಮಾಸವೇ ಶ್ರಾವಣ ಮಾಸ ಪ್ರತಿಯೊಬ್ಬರೂ ಸದ್ವಿಚಾರಗಳನ್ನುಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಉದ್ಯಮಿ ಹರ್ಷ ಬಾಸ್ಕರ್ ಕಾಮತ್ ಮಾತನಾಡಿ, ಸಂಸ್ಕೃತಿ, ಸಂಸ್ಕಾರ , ಪರಂಪರೆಗಳು ಉಳಿಯಬೇಕಾದರೆ ಇಂತಹ ಧಾರ್ಮಿಕ ಚಿಂತನಾ ಕಾರ್ಯಕ್ರಮಗಳ ಅಗತ್ಯ ಸಮಾಜಕ್ಕಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಸನ್ನಡತೆ, ಆಚಾರ- ವಿಚಾರಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು, ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ್, ಜಿಲ್ಲಾ ಕೈಗಾರಿಕಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷರಾದ ಹರ್ಷ ಬಾಸ್ಕರ್ ಕಾಮತ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್, ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಪೊನ್ನಪ್ಪ, ಮುಖಂಡರಾದ ಅನಂತರಾಮ್ ಸೇರಿದಂತೆ ಪ್ರಮುಖರು ಹಾಜರಿದ್ದರು.