ಸಾಗರ : ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯಲು ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ, ಪರಿಸರವಾದಿಗಳ ಅಭಿಪ್ರಾಯವನ್ನು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕ್ಷೇತ್ರದ ಶಾಸಕನಾಗಿ ಜನರ ಅಭಿಪ್ರಾಯ ಸರ್ಕಾರಕ್ಕೆ ತಲುಪಿಸುವುದ ನನ್ನ ಜವಾಬ್ದಾರಿ. ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಜನಾಭಿಪ್ರಾಯದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸದ್ಯ ೧ಕೋಟಿಗೂ ಹೆಚ್ಚು ಜನರು ವಾಸವಿದ್ದು, ಅವರ ಕುಡಿಯುವ ನೀರಿನ ಅಗತ್ಯ ಪೂರೈಕೆ ಮಾಡಲು ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವ ಚಿಂತನೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದ್ದರೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಯೋಚಿಸಿ ಈ ಯೋಜನೆಗೆ
ಮುಂದಾಗಿದೆ. ಶರಾವತಿ ನದಿ ನೀರು ಕೃಷಿಗಾಗಿ ಬಳಕೆ ಮಾಡುತ್ತಿಲ್ಲ. ಕೇವಲ ವಿದ್ಯುತ್ ಉತ್ಪಾದನಾ ಉದ್ದೇಶಕ್ಕೆ ಬಳಕೆಯಾದ ನಂತರ ಉಳಿದ ನೀರನ್ನು ಕುಡಿಯುವ ನೀರಿಗೆ ಒಯ್ಯಲು ಚಿಂತನೆ ನಡೆದಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಸಿ, ಸಾಗರ ಮತ್ತು ಹೊಸನಗರ ಭಾಗಕ್ಕೆ ದಿನದ ೨೪ಗಂಟೆ ವಿದ್ಯುತ್ ನೀಡಿ ಶರಾವತಿ ನದಿನೀರನ್ನು ಬೆಂಗಳೂರಿಗೆ ಒಯ್ಯಲು ಚಿಂತನೆ ನಡೆಸಿ ಎಂದು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಶರಾವತಿ ಪಂಪ್ಡ್ ವಿದ್ಯುತ್ ಯೋಜನೆ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಪ್ರತಿದಿನ ೪೦ಸಾವಿರ ಕ್ಯೂಸೆಕ್ಸ್ ನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ಪುನರ್ ಬಳಕೆ ಮಾಡಿಕೊಂಡು ೨ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಸುಮಾರು ೮೨೦೦ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾರ್ಯಾರಂಭಗೊಳ್ಳಲಿದೆ. ಹಣ ಹೊಡೆಯುವ ಯೋಜನೆ ಎನ್ನುವ ಅಪಪ್ರಚಾರ ಕೈಬಿಟ್ಟು ಭವಿಷ್ಯದ ಬಗ್ಗೆ ಗಮನ ಹರಿಸಬೇಕು. ಶರಾವತಿ ನದಿ ನೀರು ಸಾಗರ ನಗರಕ್ಕೆ ಬಳಕೆ ಮಾಡಿಕೊಳ್ಳುವ ಜೊತೆಗೆ ಸಾಗರ ಹೊಸನಗರ ಭಾಗದ ಗ್ರಾಮೀಣ
ಪ್ರದೇಶಗಳಿಗೂ ಬಳಕೆ ಮಾಡಿ ಕೊಳ್ಳಲಾಗುತ್ತದೆ. ಬಿಜೆಪಿ ಅವಧಿಯಲ್ಲಿ ಇಂತಹ ಯಾವುದೆ ಯೋಜನೆ ಜಾರಿಗೆ ತಂದಿಲ್ಲ. ಈಗ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಡಿಕೆ ಕೊಳೆರೋಗಕ್ಕೆ ಸಂಬಂಧಪಟ್ಟಂತೆ ಹೆಕ್ಟೇರ್‌ಗೆ ಕನಿಷ್ಟ ೨೫ಸಾವಿರ ರೂ. ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ. ಕಲ್ಮನೆ ಸೊಸೈಟಿಯಲ್ಲಿ ನಡೆದಿರುವ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಹಣ ಕಳೆದುಕೊಂಡವರು ಮನವಿ ಕೊಟ್ಟಿದ್ದಾರೆ. ಜನರ ಸಮಸ್ಯೆಯನ್ನು ರಾಜಕೀಯಗೊಳಿಸುವ ಕೆಲಸವನ್ನು ಕೆಲವರು ಮಾಡಿದ್ದಾರೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸೊಸೈಟಿಯನ್ನು ಸೂಪರ್ ಸೀಡ್ ಮಾಡುವ ಜೊತೆಗೆ ಹಣ ಪಾವತಿ ಮಾಡಿದವರಿಗೆ ಹಣ ವಾಪಾಸ್ ಕೊಡಿಸುವತ್ತ ಗಮನ ಹರಿಸಲಾಗುತ್ತದೆ. ಅತಿವೃಷ್ಟಿಯಿಂದ ಸುಮಾರು ೯೦ಕೋಟಿ ರೂ. ನಷ್ಟ ಸಂಭವಿಸಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಕಾಂಗ್ರೇಸ್ ಪ್ರಮುಖರಾದ ಕಲಸೆ ಚಂದ್ರಪ್ಪ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಎನ್.ಲಲಿತಮ್ಮ, ಸೈಯದ್ ಜಾಕೀರ್, ಹಮೀದ್, ವಿ.ಶಂಕರ್ ಉಪಸ್ಥಿತರಿದ್ದರು.