ಸಾಗರ : ತೀರ್ಥಹಳ್ಳಿ ತಾಲ್ಲೂಕಿನ ಪತ್ರಕರ್ತ ನಿರಂಜನ ವಿ. ಅವರ ಮೇಲೆ ದೌರ್ಜನ್ಯ ನಡೆಸಿರುವ ತೀರ್ಥಹಳ್ಳಿ ಠಾಣೆ ವೃತ್ತ ನಿರೀಕ್ಷಕ ಅಶ್ವತ್ಥ ಗೌಡ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಪ್ರಜಾವಾಣಿ ವರದಿಗಾರ ಹಾಗೂ ನಮ್ಮ ಸಂಘದ ಸದಸ್ಯ ನಿರಂಜನ ವಿ. ಆ. ೨೧ರಂದು ವರದಿಗಾರಿಕೆಗೆ ತೆರಳಿದ್ದಾಗ ಸ್ಥಳೀಯ ಠಾಣಾಧಿಕಾರಿ ಅಶ್ವತ್ಥ ಗೌಡ ಎಂಬುವವರು ಮಾಡಿರುವ ದಬ್ಬಾಳಿಕೆಯನ್ನು ನಮ್ಮ ಸಂಘ ತೀವೃವಾಗಿ ಖಂಡಿಸುತ್ತದೆ.
ಈಲ್ಲಾ ರಕ್ಷಣಾಧಿಕಾರಿಗಳು ತೀರ್ಥಹಳ್ಳಿ ಠಾಣೆಗೆ ಭೇಟಿ ನೀಡಿದಾಗ ನಿರಂಜನ್ ವರದಿ ಮಾಡಲು ತೆರಳಿದ್ದರು. ನಂತರ ಹೊರಗೆ ಉಂಟಾಗಿರುವ ಟ್ರಾಫಿಕ್ ಜಾಮ್ ಬಗ್ಗೆ ತಮ್ಮ ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಳ್ಳುತ್ತಿದ್ದಾಗ ವೃತ್ತ ನಿರೀಕ್ಷಕ ಅಶ್ವತ್ಥ ಗೌಡ ಮೊಬೈಲ್ ಕಿತ್ತುಕೊಂಡು ನಿನ್ನ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪೊಲೀಸ್ ಅಧಿಕಾರಿ ಅಶ್ವತ್ಥ ಗೌಡ ಅವರ ಈ ಕೃತ್ಯವನ್ನು ಸಂಘವು ತೀವೃವಾಗಿ ಖಂಡಿಸುತ್ತದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆ ಎನ್ನುವುದನ್ನು ನಮ್ಮ ಸಂಘ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ತಕ್ಷಣ ಜಿಲ್ಲಾ ರಕ್ಷಣಾಧಿಕಾರಿಗಳು ಅಶ್ವತ್ಥ ಗೌಡ ಅವರನ್ನು ಸೇವೆಯಿಂದ ಅಮಾನತ್ತುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ,
ಉಪಾಧ್ಯಕ್ಷ ಲೋಕೇಶಕುಮಾರ್, ಕೋಶಾಧ್ಯಕ್ಷ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಪ್ರಮುಖರಾದ ಎಂ.ರಾಘವೇಂದ್ರ, ರಫೀಕ್, ಜಮೀಲ್ ಸಾಗರ್, ರಮೇಶ್ ಗುಂಡೂಮನೆ, ಸತ್ಯನಾರಾಯಣ, ಅಖಿಲೇಶ್ ಚಿಪ್ಳಿ, ಮಾ.ವೆಂ.ಸ.ಪ್ರಸಾದ್, ಮಾ.ಸ.ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು