ಶಿವಮೊಗ್ಗ: ಶಿವಮೊಗ್ಗದ ನಿರ್ಮಾಪಕಿ ಡಾ. ಸುಮಿತಾ ಪ್ರವೀಣ್ ಬಾನು ಅವರ ನಿರ್ಮಾಣದ ಟೆಕ್ವಾಂಡೋ ಗರ್ಲ್ ಸಿನಿಮಾ ರಾಜ್ಯಾದ್ಯಂತ ಆ. 30 ರಂದು ಬಿಡುಗಡೆಯಾಗಲಿದೆ.
ಈ ಕುರಿತು ನಿರ್ಮಾಪಕಿ ಡಾ. ಸುಮಿತಾ ಪ್ರವೀಣ್ ಬಾನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಶಿವಮೊಗ್ಗದವಳು. ನನ್ನ ಪುತ್ರಿ ಋತುಸ್ಪರ್ಶ ಟೆಕ್ವಾಂಡೋ ಸಮರಕಲೆ ಕಲಿತು ನಾಲ್ಕು ಬಾರಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಅವಳಿಗಾಗಿ ಮತ್ತು ಹೆಣ್ಣುಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಮಹತ್ತರ ಸಂದೇಶವನ್ನಿಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂದರು.
ನನ್ನ ಪುತ್ರಿ ಋತುಸ್ಪರ್ಶ ಅಂತರಾಷ್ಟ್ರೀಯ ನೃತ್ಯಗಾರ್ತಿಯೂ ಆಗಿದ್ದಾಳೆ. ಟೆಕ್ವಾಂಡೋ ಒಂದು ಸಮರಕಲೆಯಾಗಿದೆ. ಹೆಣ್ಣುಮಕ್ಕಳು ಅವಶ್ಯಕವಾಗಿ ತಮ್ಮನ್ನು ತಾವು ರಕ್ಷಿಸಕೊಳ್ಳಲು ಈ ಕಲೆ ಕಲಿಯಬೇಕಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಈ ಸಿನಿಮಾದ ಮೂಲಕ ಪ್ರಯತ್ನಿಸಲಾಗಿದ್ದು, ಸುಮಾರು 200 ಮಕ್ಕಳು ಇದರಲ್ಲಿ ಅಭಿನಯಿಸಿದ್ದಾರೆ. ಮಕ್ಕಳ ಜೊತೆಗೆ ದೊಡ್ಡವರು ಕೂಡ ಈ ಚಿತ್ರವನ್ನು ನೋಡಲೇಬೇಕು ಎಂದರು.
ಬಾಲ ನಟಿ ಋತುಸ್ಪರ್ಶ ಮಾತನಾಡಿ, ಈಗಾಗಲೇ ನಾನು ಕಾಂಗೋ, ಗಂಗೆ ಗೌರಿ, ತಾರಕೇಶ್ವರ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಟೆಕ್ವಾಂಡೋ ಗರ್ಲ್ ಚಿತ್ರ ವಿಶೇಷವಾಗಿ ಹೆಣ್ಣುಮಕ್ಕಳಿ ಆತ್ಮಸ್ಥೈರ್ಯ ಮೂಡಿಸುವಂತಹ ಚಿತ್ರವಾಗಿದೆ. ಎರಡು ಹಾಡುಗಳು ತುಂಬಾ ಚೆನ್ನಾಗಿವೆ. ಅಮ್ಮ ಚಿತ್ರದ ನಿರ್ಮಾಪಕಿಯಾಗಿದ್ದಾರೆ. ಪ್ರಮೋದ್ ಛಾಯಾಗ್ರಹಣ, ಎಂ.ಎಸ್. ತ್ಯಾಗರಾಜ್ ಸಂಗೀತ ನೀಡಿದ್ದಾರೆ. ರವೀಂದ್ರ ವಂಶಿ ಚಿತ್ರ ನಿರ್ದೇಶಿಸಿದ್ದಾರೆ. ಬಹುಶಃ ಟೆಕ್ವಾಂಡೋ ಆಧಾರಿತ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ ಎಂದರು.
ಈ ಚಿತ್ರದ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿರುವ ರಘು ಗುಂಡ್ಲು ಮಾತನಾಡಿ, ಇದೊಂದು ಅತ್ಯುತ್ತಮ ಸಾಮಾಜಿಕ ಕಳಕಳಿ ಇರುವ ಚಿತ್ರವಾಗಿದೆ. ಮುಖ್ಯವಾಗಿ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು. ಪೆÇೀಷಕರ ಜವಾಬ್ದಾರಿಗಳೇನು? ಎಂಬ ಸಾಮಾಜಿಕ ಸಂದೇಶವನ್ನು ಇದು ಒಳಗೊಂಡಿದೆ. ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೂ ಈ ಚಿತ್ರ ತೋರಿಸಬೇಕಾಗಿದೆ. ಈಗಾಗಲೇ ಎಲ್ಲಾ ಜಿಲ್ಲೆಗಳ ಡಿಡಿಪಿಐಗಳಿಗೆ ಮನವಿ ಮಾಡಿದ್ದೇವೆ. ಶಾಲೆಗಳಿಂದ ಬರುವ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಸಹ ನಿರ್ಮಾಪಕ ಪ್ರವೀಣ್, ಶಶಿಕುಮಾರ್, ಟೆಕ್ವಾಂಡೋ ರಾಷ್ಟ್ರೀಯ ಕ್ರೀಡಾಪಟು ಮೀನಾಕ್ಷಿ ಇದ್ದರು.