ಶಿವಮೊಗ್ಗ,ಆ.೯: ಶಿಕಾರಿಪುರದಲ್ಲಿ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ ಮತ್ತು ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಕುಟುಂಬ ಮತ್ತು ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡ ಸತ್ಯ ಈಗ ಹೊರಬಿದ್ದಿದೆ.
ಸ್ವತಃ ಡಿ.ಕೆ.ಶಿವಕುಮಾರ್ ಅವರೇ ವಿಜಯೇಂದ್ರ ಅವರಿಗೆ ಕಾಂಗ್ರೆಸ್ಸಿನ ಭಿಕ್ಷೆಯಿಂದ ನೀನು ಶಾಸಕನಾಗಿ ಆಯ್ಕೆಯಾಗಿದ್ದೀಯ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಆಗಲಿ, ಅವರ ತಂದೆಯವರಾಗಲಿ ಅಥವಾ ಬಿಜೆಪಿಯವರಾಗಲಿ ಯಾವುದೇ ಪ್ರತ್ಯುತ್ತರವನ್ನು ನೀಡಿಲ್ಲ, ಹಾಗಾಗಿ ಹೊಂದಾಣಿಕೆ ಮಾಡಿಕೊಂಡಿರುವುದು ಸ್ಪಷ್ಟ ಎಂದರು.
ಬಿ.ಎಸ್.ಯಡಿಯೂರಪ್ಪನವರು ಸ್ವಾರ್ಥಕ್ಕಾಗಿ ಈ ಹೊಂದಾಣಿಕೆ ಮಾಡಿಕೊಂಡಿರುವುದನ್ನು ವಿರೋಧಿಸಿಯೇ ನಾನು ಚುನಾವಣೆಗೆ ನಿಂತಿದ್ದೆ. ಈಗ ಅದು ಬಹಿರಂಗಗೊಂಡಿದೆ. ಬಿಜೆಪಿಯವರಿಗೆ ಮತ್ತು ಕಾಂಗ್ರೆಸ್ಸ್ನವರಿಗೆ ಯಾವುದೇ ಸಿದ್ಧಾಂತಗಳು ಇಲ್ಲ, ಇದು ಸ್ವಾರ್ಥದ ರಾಜಕಾರಣವಾಗಿದೆ. ಶಿಕಾರಿಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಇದೇ ರೀತಿಯ ಹೊಂದಾಣಿಕೆ ರಾಜಕಾರಣ ನಡೆದಿರಬಹುದು,ಇದರಿಂದಾಗಿ ಎರಡು ಪಕ್ಷದ ಕಾರ್ಯಕರ್ತರನ್ನು ವಂಚಿಸಲಾಗಿದೆ. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದರು.
ಮೈಸೂರು ಚಲೋ ಮತ್ತು ಪಾದಯಾತ್ರೆಯ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಹಗರಣಗಳ ದಾಖಲೆ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ಹೀಗೆ ಬೀದಿಗೆ ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ಮೂಡರ ಬೀದಿಬದಿ ಜಗಳದ ನಾಟಕವಂತಾಗಿದೆ. ನಾಯಕ-ನಾಯಕರು ಏಕ ವಚನದಲ್ಲಿ ಬಡಿದಾಡಿಗೊಂಡಿದ್ದಾರೆ ಎಂದ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಎಲ್ಲಾ ಭ್ರಷ್ಟಚಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.
ಆಶ್ರಯಮನೆಗಳ ಬಗ್ಗೆ ಸಾಕಷ್ಟು ಹೋರಾಟ ಮಾಡಿದ ಫಲವಾಗಿ ೨೮೮ ಮನೆಗಳನ್ನು ಈಗಾಗಲೇ ಹಂಚಲಾಗಿದೆ. ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ ವಸತಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡಿ ಆಗಸ್ಟ್ ತಿಂಗಳೋಳಗೆ ೬೦೦ ಮನೆಗಳನ್ನು ಹಂಚಲಾಗುವುದು ಎಂದು ಭರವಸೆ ನೀಡಿದ್ದು, ಆದರೆ ಅಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳು ನೀಡದೇ ಹಂಚಬಾರದು. ಇವೆಲ್ಲ ಸೌಲಭ್ಯಗಳನ್ನು ನೀಡಿದ ನಂತರವೇ ಮನೆಗಳನ್ನು ವಿತರಿಸಬೇಕು ಎಂದರು.
ಆಶ್ರಯಮನೆ ವಿತರಣೆಗೆ ಆಗ್ರಹಿಸಿ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಸೌಲಭ್ಯಗಳ ಒದಗಿಸಲು ಆಗ್ರಹಿಸಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಒತ್ತಾಯಿಸಿ ಆ.೧೩ರಂದು ದೈವಜ್ಞವೃತ್ತದಿಂದ, ದುರ್ಗಿಗುಡಿ,ನೆಹರು ರಸ್ತೆ, ಶಿವಪ್ಪ ನಾಯಕ ಪ್ರತಿಮೆ ಮೂಲಕ ನಗರಸಭೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪಾಲಿಕೆಗೆ ಮನವಿ ಸಲ್ಲಿಸಲಾಗುವುದು. ಸುಮಾರು ೩೦೦೦ಕ್ಕೂ ಹೆಚ್ಚು ಜನರು ಭಾಗವಹಿಸುವರು ಎಂದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹಲ್ಲೆ, ಅತ್ಯಾಚಾರಗಳು ನಡೆಯುತ್ತಿದೆ. ಇದು ತಕ್ಷಣವೇ ನಿಲ್ಲಬೇಕು. ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು. ಭಾರತ ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಬೇಕು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಶಂಕರ್ಗನ್ನಿ, ಎಂ.ಶಂಕರ್, ಮಹಾಲಿಂಗಶಾಸ್ತ್ರಿ, ಅ.ಮಾ.ಪ್ರಕಾಶ್, ಬಾಲು, ಚಿದಾನಂದ, ನಾಗರಾಜು, ಮೋಹನ್ ಮುಂತಾದವರು ಇದ್ದರು.