ಶಿವಮೊಗ್ಗ, ಜು.೩೧:
ಶಿವಮೊಗ್ಗ ತಾಲೂಕು ಹಾಗೂ ಜಿಲ್ಲಾ ಕೇಂದ್ರದ ಕೊನೆಯ ಭಾಗದಲ್ಲಿರುವ ಹಾಡೋನಹಳ್ಳಿ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು ಗುಂಡಿಗಳಿಂದ ಮುಳುಗಿಹೋಗಿದೆ. ಕೂಡಲೇ ಅತಿವೃಷ್ಟಿ ಹಿನ್ನೆಲೆ ಹಾಗೂ
ಗ್ರಾಮದ ಜನರ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ಅನುವು
ಮಾಡಿಕೊಡುವಂತೆ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಮಳೆ ನಿಂತ ತಕ್ಷಣ ರಸ್ತೆಯನ್ನು ನವೀಕರಣ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾಡೋನಹಳ್ಳಿ ಗ್ರಾಮಕ್ಕೆ ಶಿವಮೊಗ್ಗ ಹೊನ್ನಾಳಿ ರಸ್ತೆಯ ಭಾಗದಿಂದ ಸೇರುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಸುಮಾರು ಎರಡೂವರೆ ಕಿಲೋಮೀಟರ್ ದೂರದ ಈ ರಸ್ತೆಯಲ್ಲಿ ಊರಿನ ಎಲ್ಲಾ ವಾಹನಗಳು ಹಾಗೂ ಸರ್ಕಾರಿ ಬಸ್ ಗಳು ನಿತ್ಯ ಸಂಚರಿಸುತ್ತಿದ್ದು
, ಶಾಲಾ ವಾಹನಗಳು ಸಹ ಇಲ್ಲಿಗೆ ಬರುತ್ತವೆ. ಈ ರಸ್ತೆ ಅತ್ಯಂತ ಕಿರಿದಾಗಿದ್ದು ಮಗ್ಗುಲಿನಲ್ಲೇ ವಿದ್ಯುತ್ ಕಂಬಗಳು ಇರುವುದರಿಂದ ನಿತ್ಯ ಆತಂಕ ವಾಹನ ಚಾಲಕರಲ್ಲಿ ಮನೆ ಮಾಡಿದೆ.
ಈ ಎರಡುವರೆ ಕಿಲೋಮೀಟರ್ ದೂರವನ್ನು ಸುಮಾರು ಮುಕ್ಕಾಲು ಗಂಟೆಗಳ ಕಾಲ ಸಂಚರಿಸಬೇಕಾದಷ್ಟು ಪ್ರಮಾಣದ ಗುಂಡಿಗಳು ಈ ರಸ್ತೆಯಲ್ಲಿ ಎದ್ದು ಕಾಣುತ್ತವೆ. ಹಾಗಾಗಿ ಕೂಡಲೇ ಈ ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಇಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಗ್ರಾಮದ ನೂರಾರು ಜನರ ಸಹಿಗಳೊಂದಿಗೆ ಮನವಿ ಪತ್ರವನ್ನು ಮುಖಂಡರು ಸಲ್ಲಿಸಿದರು.
ಈ ಮನವಿಯಲ್ಲಿ ಗ್ರಾಮದ ಗಿರಿಜಾಬಾಯಿ ಓಂ ಶಿವಾಜಿ ರಾವ್ ಅವರ ಮನೆಯಿಂದ ಆಲಕಟ್ಟೆ ಚೌಡಮ್ಮನ ದೇವಸ್ಥಾನದವರೆಗೆ ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು, ನವೀಕರಣಕ್ಕೆ ಅನುಕೂಲ ಮಾಡಿಕೊಡಲು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಈ ರಸ್ತೆಯ ದುರಸ್ತಿಗೆ ಸೂಚಿಸಲಾಗುತ್ತದೆ ಎಂದು ತಿಳಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮದ ಡಿ ಸಿ ಜಗದೀಶ್ವರ್, ಕೆ ಎಸ್ ಈಶ್ವರಪ್ಪ, ಎಚ್ ಎಮ್ ಮಧು ಉಪಸ್ಥಿತರಿದ್ದರು.