ಸಾಗರ : ಮಾನವ ಕಳ್ಳ ಸಾಗಾಣಿಕೆಗೆ ಬಡತನವೇ ಮುಖ್ಯ ಕಾರಣ. ಬಡತನದಿಂದ ಬೇರೆಬೇರೆ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ ಎಂದು ಹಿರಿಯ ವ್ಯವಹಾರ ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಭಾಗಡಿ ತಿಳಿಸಿದರು.
ಇಲ್ಲಿನ ಪ್ರಗತಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ
ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನ, ಬಾಲ್ಯ ವಿವಾಹ ನಿಷೇದ ಕಾಯ್ದೆ ಮತ್ತು ಪೋಕ್ಸೋ ಕಾನೂನು ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾನೂನಿನ ಅರಿವು ಪ್ರತಿಯೊಬ್ಬರೂ ಹೊಂದಿರಬೇಕು. ಮಾನವ ಕಳ್ಳ ಸಾಗಾಣಿಕೆ ಪ್ರಕರಣ ಹೆಚ್ಚಲು ಆರ್ಥಿಕ ಸಂಕಷ್ಟ, ಅನಕ್ಷರತೆ ಪ್ರಮುಖ ಕಾರಣವಾಗಿದೆ. ಇಂತಹ ಘಟನೆಗಳು ತಡೆಯುವ ಕೆಲಸವಾಗಬೇಕು. ಮೌಡ್ಯದ ಹೆಸರಿನಲ್ಲಿ ಹಾಗೂ ಕೌಟುಂಬಿಕ ಕಾರಣಗಳಿಂದ ಬಾಲ್ಯ ವಿವಾಹ ಪ್ರಕರಣ ಜಾಸ್ತಿಯಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು, ಹದಿಹರೆಯದ ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ
ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ. ಪೋಕ್ಸೋ ಕಾಯ್ದೆ ಬಗ್ಗೆ ಹೆಚ್ಚಿನ ಜನಜಾಗೃತಿ ಮೂಡಿಸುವ ಕೆಲಸವಾಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಭವಿಷ್ಯದಲ್ಲಿ ಅವರು ಸನ್ಮಾರ್ಗದಲ್ಲಿ ನಡೆಯುವ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಉಪಾಧ್ಯಕ್ಷ ಬಿ.ಆರ್.ಜಯಂತ್, ನೆಲದ ಕಾನೂನು ಪಾಲನೆ ಮಾಡುವುದರಿಂದ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆಯನ್ನು ಅರ್ಥ ಮಾಡಿಕೊಳ್ಳುವ
ಮೂಲಕ ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಕಾನೂನಿನ ಅರಿವು ಹೊಂದಿದರೆ ಅಪರಾಧ ಮಾಡುವುದಿಲ್ಲ. ಪ್ರತಿಯೊಬ್ಬರೂ ಕಾನೂನಿಗೆ ತಲೆಬಾಗಿ ನಡೆಯಬೇಕು ಎಂದು ಹೇಳಿದರು.
ಸರ್ಕಾರಿ ಸಹಾಯಕ ಅಭಿಯೋಜಕ ಚಂದ್ರಶೇಖರ್ ಎಚ್.ಎನ್. ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಈ., ಕಾರ್ಯದರ್ಶಿ ರಮೇಶ್ ಎಚ್.ಬಿ., ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾಬಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಪ್ರಮುಖರಾದ ಸುವರ್ಣ ನಾಯ್ಕ್, ವಿಜಯಲಕ್ಷ್ಮೀ ಡಿ.ಕೆ., ಸಾವಿತ್ರಿ, ಪರಮೇಶ್ವರ್, ವಿ.ಟಿ.ಸ್ವಾಮಿ ಇನ್ನಿತರರು ಹಾಜರಿದ್ದರು. ತನ್ಮಯ್ ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಶಂಕರಪ್ಪ ವಂದಿಸಿದರು.