

ವಾರದ ಅಂಕಣ- 6
ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
ಪಾಸಿಟಿವ್ ಮನಸುಗಳು ನೆಗೆಟಿವ್ ಕಡೆ ವಾಲಲು ಮುಖ್ಯ ಕಾರಣ ಹಣ. ಈ ಹಣವೆಂಬ ಮಾಯೆ ನಿಜಕ್ಕೂ ಮಾಯಾವಿಯಾ? ಅಥವಾ ಅದು ನಮ್ಮ ನಡುವೆ ಕಂಡ ಕಂಡವರಿಗೆ ಟೋಪಿ ಹಾಕುವ ಕಿರಾತಕರಿಂದ ಅಮಾಯಕರಿಗೆ ಮಾಯಾ ಮಾಡಿಸುತ್ತದೆಯೇ ಎಂಬ ಅನುಮಾನ ಇಂದಿನ ನೆಗೆಟಿವ್ ಥಿಂಕಿಂಗ್ ಚಿಂತನೆ.
ಹಣ ಎಂಬುದಕ್ಕೆ ಸಾಕಷ್ಟು ಹೆಸರುಗಳಿವೆ. ಬಗೆಬಗೆಯ ವೇಷದಲ್ಲಿ ಭೂಷಿತವಾಗುವ ಹಣವೆಂಬ ಮಾಯಾವಿಯ ಒಂದಿಷ್ಟು ನೆನಪುಗಳ ಸಾಲುಗಳನ್ನು ಗೆಳೆಯರೊಬ್ಬರು ಸಣ್ಣದಾಗಿ, ಚೊಕ್ಕದಾಗಿ ಗೀಚಿದ್ದಾರೆ. ಅದನ್ನು ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು.

ಓ ಹಣವೇ ನಿನಗೆ ಅದೆಷ್ಟು ಹೆಸರು
ಗುಡಿಯೊಳಗೆ ನಿನ್ನ ಹೆಸರು ಕಾಣಿಕೆ
ಗುಡಿಯ ಹೊರಗೆ ನಿನ್ನ ಹೆಸರು ಭಿಕ್ಷೆ
ನೌಕರಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ
ಕಾರ್ಮಿಕರಿಗೆ ಕೊಟ್ಟರೆ ಅದು ಕೂಲಿ
ಬಲಿಷ್ಠರಿಗೆ ಕೊಟ್ಟರೆ ನಿನ್ನ ಹೆಸರು ದೇಣಿಗೆ
ಕನಿಷ್ಠನಿಗೆ ಕೊಟ್ಟರೆ ನಿನ್ನ ಹೆಸರು ದಾನ
ಸರ್ಕಾರಕ್ಕೆ ಕಟ್ಟಿದರೆ ತೆರಿಗೆ
ನಿವೃತ್ತಿಯಲ್ಲಿ ವೃದ್ಧರಿಗೆ ಪಿಂಚಣಿ ವೇತನ
ಮನೆಯಲ್ಲಿ ಯಜಮಾನನಿಲ್ಲದ ಮನೆಯೊಡತಿಗೆ ವಿಧವಾ ವೇತನ
ಕಟೆಕಟೆಯಲ್ಲಿ ಕಟ್ಟಿದರೆ ದಂಡ
ಕಾರ್ಯ ನಿಮಿತ್ತ ಕಳ್ಳ ದಾರಿಯಲ್ಲಿ ಬಳಕೆಯಾದರೆ ನಿನ್ನ ಹೆಸರು ಅದು ಲಂಚ
ಸಾವಿನ ಮನೆಯಲ್ಲಿ ಸಂಭ್ರಮಿಸುವ ನಿನ್ನ ಹೆಸರು ಪರಿಹಾರ
ಹೋಟೆಲ್ ನಲ್ಲಿ ಬಿಲ್
ಮೋಟರ್ ನಲ್ಲಿ ನಿನ್ನ ಹೆಸರು ಬಾಡಿಗೆ
ಬಸ್ನಲ್ಲಿ ನಿನ್ನ ಹೆಸರು ಟಿಕೆಟ್
ಕರುಣೆ ಮರೆತವರ ಕೈಲಿ ನಿನ್ನ ಹೆಸರು ಸುಫಾರಿ
ಒಟ್ಟಿನಲ್ಲಿ ನೀನು ನಿಜವಾದ ಸಂಚಾರಿ
ಬಡವರಿಗೆ ಬಗ್ಗದ ವ್ಯಾಪಾರಿ
ಹಿಡಿತನಕ್ಕೆ ಹಿಗ್ಗುವೆ, ಕಿರಿತನಕ್ಕೆ ಕುಗ್ಗುವೆ
ಪ್ರಚಾರಕ್ಕೆ ಅರಳುವೆ
ವಿಚಾರಕ್ಕೆ ಬಾಡುವೆ
ತಪ್ಪು ನಿನ್ನದಲ್ಲ ಹಣವೇ,
ನೀ ಆಡಿಸುವವರ ಕೈಗೊಂಬೆಯಾಗಿರುವೆ
ಸಾವಿರಾರು ಹೆಸರು ಇರುವ ನಿನಗೆ ನಿಷ್ಠೆ ಯಾವುದು? ಪ್ರತಿಷ್ಠೆ ಯಾವುದು?
ಅರಿಯದ ಅಮಾಯಕರಿಗೆ ನೀನು ಗಗನ ಕುಸುಮ
ಬಡಿದುಂಡವನಿಗೆ ದೊಡ್ಡಪ್ಪ
ದುಡಿದುಂಡವನಿಗೆ ಚಿಕ್ಕಪ್ಪ

ನಿನ್ನ ಅಧಿಕಾರ ಅರಿಯದವರಿಗೆ ಅಯ್ಯೋ ಪಾಪ…!
ಆಡಿಸುವವರ ಕೈಗೊಂಬೆಯಾಗಿರುವ ಹಣದ ಬಗ್ಗೆ ಇಷ್ಟೆಲ್ಲ ಹೆಸರುಗಳನ್ನು ಉಲ್ಲೇಖಿಸುವ ಉದ್ದೇಶ ಅತ್ಯಂತ ಸ್ಪಷ್ಟವಾಗಿದೆ. ಇಲ್ಲಿ ಹಣ ಎಂಬುದು ಆಡಿಸುವ ಗಿರ್ಕಿ ವಾಲಗಳ ಆಟ ಎಂದರೆ ತಪ್ಪಾಗಲಿಕ್ಕಿಲ್ಲ.
ಮನದಲ್ಲಿ ನೂರಾರು ಕೆಟ್ಟದ್ದನ್ನು ಇಟ್ಟುಕೊಂಡು ಹೇಗೆ ಟೋಪಿ ಹಾಕಲಿ ಎಂದು ಕಾಯುತ್ತಿರುವ ಖದೀಮ ಮನಗಳು ಈ ಹಣದ ವಿಷಯದಲ್ಲಿ ನಾನಾ ರಗಳೆಗಳನ್ನು ಅಮಾಯಕ ಮುಗ್ಧ ಮನಸುಗಳನ್ನು ವಂಚುತ್ತಿರುವುದು.ನಿತ್ಯ ಸತ್ಯದಂತಿರುವ ಕಂಡೂ ಕಾಣದಂತಿರುವ ಕಾಣದೇ ಇರುವಂತೆ ನಾಟಕ ಮಾಡುವ ಇಂತಹ ವ್ಯವಹಾರಗಳು ನಡೆದಿದ್ದರೂ ಸಹ ಸಕಾರಾತ್ಮಕ ಮನಸ್ಸುಗಳು ನನಗಿದು ಬೇಕಿಲ್ಲದ್ದು, ನಾನೇ ತಪ್ಪು ಮಾಡಿದೆ ಎಂದು ಇಡೀ ತಪ್ಪನ್ನು ತನ್ನ ಮೇಲೆ ಎಳೆದುಕೊಳ್ಳುತ್ತಿರುವುದು ಸುಳ್ಳೇನಲ್ಲ.

ಮೋಸ ಮಾಡುವವರಿರುವುದರಿಂದ ಮೋಸ ಹೋಗುವವರು ಇರುತ್ತಾರೆ ಎಂಬುದು ತಪ್ಪು. ಎಲ್ಲಿಯವರೆಗೆ ಮುಗ್ಧ ಮನಸುಗಳು ಮೋಸ ಹೋಗಲು ಸಿದ್ದವಾಗಿರುತ್ತವೋ, ಅಲ್ಲಿಯವರೆಗೆ ವಂಚನೆ ಮೋಸ ಅನ್ಯಾಯ ನಡೆಯುತ್ತಲೇ ಇರುತ್ತದೆ. ಹಾಗಾಗಿ ಮುಗ್ಧತೆಯನ್ನು ಒತ್ತಟ್ಟಿಗೆ ಬಿಟ್ಟು ತಮ್ಮದೇ ನಿರ್ಧಾರ ಹಾಗೂ ನಿಲುವುಗಳಲ್ಲಿ ಸ್ಪಷ್ಟವಾಗಿರಬೇಕು.

ನಿಮ್ಮ ಮಗ್ಗುಲಲ್ಲೇ ಇರುವ ಕಾಣದ ಕೈಗಳ ಬಗ್ಗೆ ವಂಚನೆಯ ಜಾಲಗಳ ಬಗ್ಗೆ ಸದಾ ಅರಿವಿರುವುದು ಅತ್ಯಗತ್ಯ. ಹಣ ಎಂಬುದು ಒಂದು ವಸ್ತು. ಆದರೆ ಅದೇ ಈಗಿನ ಬದುಕು ಅದೇ ವಂಚನೆಯ ಹಾದಿ ಹುಡುಕುವ ಒಂದು ಸಾಧನವಾಗಿರುವುದು ಇಂದಿನ ವಿಶೇಷಗಳಲ್ಲಿ ಮತ್ತೊಂದು ಕಹಿ ಸುದ್ದಿ. ಹಣ ಕೆಲ ಕಿಡಿಗೇಡಿ ಮನಗಳಲ್ಲಿ ಇಲ್ಲಸಲ್ಲದ ವಂಚನೆಯ ಜಾಡು ಹುಡುಕಿ ಕೊಡುವುದು ಸತ್ಯ ಎಂಬುದಾದರೆ ಅದೇ ಬಗೆಯಲ್ಲಿ ಮೋಸ ಹೋಗುವ ಮನಸ್ಸುಗಳು ಎಚ್ಚರಾವಸ್ಥೆಯನ್ನು ಕಳೆದುಕೊಳ್ಳುತ್ತಿರುವುದು ದುರಂತವಲ್ಲವೇ?

ಇಂದಿನ ಬದುಕಲ್ಲಿ ದುಡಿದು ತಿನ್ನುವ ಸಾಕಷ್ಟು ಜನ ನೆಮ್ಮದಿಯನ್ನು ಹುಡುಕುತ್ತಾರೆ. ಆದರೆ ಇನ್ನೊಬ್ಬರಿಗೆ ವಂಚಿಸಿ ಸದಾ ತಮ್ಮ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವವರು ಇಂದಿನ ದಿನಮಾನಗಳಲ್ಲಿ ಹಣವಂತರಾಗಿ ಬದುಕಬಹುದು. ಆದರೆ ಅಂತಿಮವಾಗಿ ನಮ್ಮಲ್ಲೊಂದು ನಂಬಿಕೆ ಇದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬಂತೆ ಮೋಸಗಾರನಿಗೆ ಎದೆ ಭಗವಂತ ತಿರುಗಿ ಒದೆಯುತ್ತಾನೆ. ಬರಬಾರದ ಎಲ್ಲವೂ ಅವನಿಗೆ ದಕ್ಕುತ್ತವೆ ಎಂಬುದು ಇಂದಿನ ಸಾಮಾನ್ಯ ನಂಬಿಕೆ.
ಮನಸ್ಸುಗಳ ನಡುವೆ ಹುಳಿ ಹಿಂಡುವ ವಂಚಿಸುವ ಕೀಚಕ ಮನಸುಗಳಿಗೆ ಎಂದಿನಂತೆ ಇಂದೂ ಸಹ ಧಿಕ್ಕಾರ.
