ರೈತರೇ ತಮ್ಮ ಜಮೀನುಗಳಲ್ಲಿ ಮೊಬೈಲ್ ಆಪ್ ಮೂಲಕ ರೈತರ ಸರ್ವೇ ನಂಬರ್ ವಾರು, ಹಿಸ್ಸಾವಾರು ಬೆಳೆ ವಿವರ ದಾಖಲಿಸುವ, ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಸಹಿತ ‘ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ ೨೦೨೪-೨೫’ ರಲ್ಲಿ ಅಪ್ಲೋಡ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜು.೨೩ ರಂದು ಜಿಲ್ಲಾದಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ೨೦೨೪ ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಬೆಳೆ ಸಮೀಕ್ಷೆ ಕಾರ್ಯಕ್ರಮದಲ್ಲಿ ಬೆಳೆ ವಿಮೆ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮುಂಗಾರು ಹಂಗಾಮಿಗೆ ಆಯ್ದ ಹೋಬಳಿಗಳಲ್ಲಿ ರಾಗಿ(ಮಳೆ ಆಶ್ರಿತ) ಹಾಗೂ ಜೋಳ (ಮಳೆಆಶ್ರಿತ) ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತ(ನೀರಾವರಿ/ಮಳೆ ಆಶ್ರಿತ), ಮುಸುಕಿನ ಜೋಳ(ನೀರಾವರಿ/ಮಳೆ ಆಶ್ರಿತ) ಬೆಳೆಗಳು ಆಯ್ಕೆಯಾಗಿರುತ್ತವೆ. ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಸರ್ಕಾರದಿಮದ ಆಯ್ಕೆಯಾದ ಓರಿಯಂಟಲ್ ಜನರಲ್ ಇನ್ಶೂರೆನ್ಸ್ ಕಂಪನಿ ಇವರ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುವುದು.
ಬೆಳೆ ವಿಮೆಗಾಗಿ ನೋಂದಾಯಿಸಲು ಅಂತಿಮ ದಿನಾಂಕದ ಒಳಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವAತೆ ರೈತರಲ್ಲಿ ಮನವಿ ಮಾಡಿದರು.
ಬಿತ್ತನೆ/ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೇ ನೋಂದಾಯಿಸಲು ಸಹ ಅವಕಾಶವಿರುತ್ತದೆ. ಬೆಳೆ ಸಾಲ ಪಡೆಯುವ ರೈತರನ್ನು ಬೆಳೆ ವಿಮೆ ಯೊಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುವುದು. ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕೆ ೭ ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ ಮತ್ತು ಆಧಾರ್ ಸಂಖ್ಯೆ ಸಹಿತ ತಮಗೆ ಹತ್ತಿರವಿರುವ ಬ್ಯಾಂಕ್/ಆರ್ಥಿಕ ಸಂಸ್ಥೆಗಳು, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸಮೀಪವಿರುವ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅಲ್ಲದೇ ಸಂರಕ್ಷಣೆ ವೆಬ್ಸೈಟ್ http://samrkshane.karnataka.gov.in ನಲ್ಲಿಯೂ ಸಹ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.