ವಾರದ ಅಂಕಣ- 5
ಗಜೇಂದ್ರಸ್ವಾಮಿ ಎಸ್. ಕೆ., ಶಿವಮೊಗ್ಗ

ತಿರಿದು, ಹರಿದೂ, ಕೊರೆದು, ಕರೆದು ದಾನವ ಮಾಡು | ಪರಮನ ಕೃಪೆಯು ನಿನಗಕ್ಕು ಸ್ವರ್ಗವು | ನೆರೆಮನೆಯಕ್ಕು ಸರ್ವಜ್ಞ
ಈ ಸರ್ವಜ್ಞರ ವಚನದ ಸಾಲುಗಳು ಈಗಲೂ ನಮ್ಮ ನಡುವಿನ ಮುಗ್ದ ಮನುಷ್ಯತ್ವದ ಮನಸುಗಳ ನಡುವಿನ ದಾನ ಧರ್ಮದ ನಿಯತ್ತುಗಳು ಈಗಲೂ ಚಾಲ್ತಿಯಲ್ಲಿವೆ. ಆದರೆ ಇಂದಿನ ಸಮಾಜಘಟ್ಟದಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಇಲ್ಲೇ ನಡೆಸುವ ದಂಧೆಗಳನ್ನು ಕಣ್ಣಾರೆ ಕಂಡ ಸಮಾಜದ ಬಹಳಷ್ಟು ಜನ ದಾನ ಧರ್ಮ ಹಾಗೂ ಕೈಲಿದ್ದದ್ದನ್ನು ಕೊಡಲು ಹಿಂದೇಟು ಹಾಕುವ ಮನೋಭಾವ ಬೆಳೆಸಿಕೊಂಡಿರುವುದನ್ನು ಕಾಣುತ್ತೇವೆ.


ಒಂದಂತೂ ಸ್ಪಷ್ಟ. ನಿಜಕ್ಕೂ ಮನುಷ್ಯತ್ವ ಹೊಂದಿರುವ ಬಹಳಷ್ಟು ಜನ ಕೈಲಾದ ಸಹಾಯವನ್ನು ಈಗಲೂ ನಿರಂತರವಾಗಿ ಮಾಡುತ್ತಾರೆ. ಅಮ್ಮ ತಾಯಿಯೆನ್ನುವ ಭಿಕ್ಷುಕ ಈಗ ಮರೆ ಮಾಸುತಿದ್ದಾನೆ. ಅಣ್ಣ ಐದು ರೂಪಾಯಿ ಹತ್ತು ರೂಪಾಯಿ ಕೊಡಿ. ನಾನು ಊರಿಗೆ ಹೋಗಬೇಕಿತ್ತು. ದುಡ್ಡು ಕಳಕೊಂಡೆ ಉಂಡೇ ಇಲ್ಲ. ದುಡ್ ಕೊಡ್ರಿ. ಊಟ ಮಾಡಿಲ್ಲ.ಇಲ್ಲ ನನ್ ಹೆಂಡ್ತಿ ಇಲ್ಲ ಮಕ್ಕಳು ಸೀರಿಯಸ್ ಆಗಿದ್ದಾರೆ. ಸಹಾಯ ಮಾಡಿ ಎಂದು ಹಾದಿ ಬೀದಿಯಲ್ಲಿ ಕೇಳುವವರು ಒಂದೆಡೆಯಾದರೆ ಅದರಲ್ಲಿ ನಿಜವಾಗಿಯೂ ನೊಂದವನು ಯಾರು ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿದೆ.


ಇಂದಿನ ಜನಸ್ತೋಮ ಇಲ್ಲಿ ಕೈಲಾಗಿದ್ದನ್ನು ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿರುವುದು ಕೆಲವೇ ಕೆಲವು ವಿಕೃತ ಮನೋಭಾವದ ವ್ಯಕ್ತಿಗಳಿಂದ ಎಂದರೆ ತಪ್ಪಾಗಲಿಕ್ಕಿಲ್ಲ.
ನಾ ಕಂಡ ಅನುಭವವನ್ನು ಇಲ್ಲಿ ಹೇಳಲು ಇಷ್ಟಪಡುತ್ತೇನೆ. ಪತ್ರಿಕಾಕಚೇರಿಯಲ್ಲಿ ಕುಳಿತಿದ್ದಾಗ ಸುಮಾರು 75 ವರ್ಷದ ವೃದ್ಧಯೊಬ್ಬರು ಬಂದು ಶಿಕಾರಿಪುರಕ್ಕೆ ಹೋಗಬೇಕು ದುಡ್ಡು ಕಳೆದುಕೊಂಡಿದ್ದೇನೆ ಎಂದರು. ನಾನು ಅಯ್ಯೋ ಪಾಪ ಎಂದು ನಮ್ಮ ಕಚೇರಿಯ ಸಿಬ್ಬಂದಿ ಜೊತೆ ಅವರನ್ನು ಬಸ್ ಸ್ಟಾಂಡ್ ಗೆ ಕಳಿಸಿ, ತಿಂಡಿಕೊಡಿಸಿ, ಬಸ್ಸಿಗೆ ಬೇಕಿದ್ದ 70 ರೂಪಾಯಿ ಕೊಟ್ಟು ಬರುವಂತೆ ಹೇಳಿದ್ದನ್ನು ಮಾಡಿದ್ದಾರೆ. ಅದೇ ಹೆಂಗಸು ಮೂರ್ನಾಲ್ಕು ದಿನದ ನಂತರ ತರಕಾರಿ ಮಾರುಕಟ್ಟೆ ಬಳಿ ನನ್ನ ಎದುರೇ ಕೈಚಾಚಿ ಅಣ್ಣ ಸೊರಬ ಹೋಗಬೇಕು ದುಡ್ಡು ಕಳೆದುಕೊಂಡಿದ್ದೇನೆ ಎನ್ನಬೇಕೇ..? ನನ್ನ ಪರಿಸ್ಥಿತಿ ಹೇಗಾರಲಿಕ್ಕೆ ಬೇಕು? ಏನು ಮಾಡಿದೆ. ನಾನಾವತ್ತು ಏನು ಮಾಡಿದೆ ಏಕೆ ಕೊಡಬೇಕಿತ್ತು ಎಂದುಕೊಂಡು ಗದರಿಸಿ ಕಳಿಸಿದ ಘಟನೆ ಅಷ್ಟೇ.

ಇಂತಹ ಸಾವಿರಾರು ಘಟನೆಗಳು ನಿತ್ಯ ನಿರಂತರ ನಮ್ಮ ಮುಂದೆ ನಡೆಯುತ್ತದೆ.
ಇದು ಒಂದು ಬಗೆಯ ಎತ್ತುವಳಿಯಾದರೆ, ಮತ್ತೊಂದು ಕಡೆ ಇನ್ನೊಂದು ಬಗೆಯ ಬಹುದೊಡ್ಡ ಸಂಚು ನಡೆಯುತ್ತದೆ. ಇಲ್ಲಿ ಜನರನ್ನ ಯಾಮಾರಿಸುವ ಎತ್ತುವಳಿ ನಡೆಯುತ್ತಿದೆ. ಜೀವನದಲ್ಲಿ ಯಾರಿಗೂ ಕೊಡಲ್ಲ ಎನ್ನುವ ಮನೋಭಾವ ಬೆಳೆದಿದೆ.


ಸ್ವಯಂ ಸಮಾಜ ಸೇವಕ ಹೆಸರಿ

ನ ವ್ಯಕ್ತಿಗಳು ಯಾರದೋ ಹೆಸರು ಹೇಳಿ ಇವರಿಗೆ ಕಷ್ಟ ಆಗಿದೆ. ಈ ಬೀದಿಯವರಿಗೆ ಉಣ್ಣಲು ಅನ್ನವಿಲ್ಲ. ಮನೆ ಮುರಿದುಹೋಗಿದೆ. ಅವರು ಫುಲ್ ಸೀರಿಯಸ್ ಆಸ್ಪತ್ರೆಗೆ ಸೇರಿಸಬೇಕು. ದಯಮಾಡಿ ದಾನ ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್, ಐ ಎಫ್ ಎಸ್ ಸಿ ಕೋಡ್ ಹಾಗೂ ಫೋನ್ ಪೇ ಗೂಗಲ್ ಪೇ ನಂಬರ್ ಗಳನ್ನು ಈ ಸಾಮಾಜಿಕ ಜಾಲತಾಣಗಳ ಮೂಲಕ ಹರಿ ಬಿಡುತ್ತಾರೆ. ಇಂತಹುದನ್ನು ಕಂಡ ಮಾನವೀಯ ಮನುಷ್ಯನ ಸಹಜ ಮನಸ್ಸುಗಳು ಒಂದಿಷ್ಟು ಸಹಾಯ ಮಾಡುತ್ತವೆ.
ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬ ಪುನೀತ್ ರಾಜಕುಮಾರ್ ರವರ ನಿದರ್ಶನಗಳಂತೆ ಬಹಳಷ್ಟು ಜನ ಸಹಾಯ ಮಾಡಿ ಒಳ್ಳೆಯದಾಗಲಿ ಎಂದು ಹರಿಸಿರುತ್ತಾರೆ. ನಿಜಕ್ಕೂ ಆ ಹಣ ನೊಂದವರಿಗೆ ಹೋಯಿತಾ, ಇಲ್ಲ ಅದಲ್ದೆನಾದರೂ ಪರ್ಸೆಂಟೇಜ್ ವ್ಯವಹಾರ ನಡೆಯಿತಾ? ಆ ಹಣ ಯಾರಿಗೆ ಹೋಯಿತು. ಈ ಮೂಲಗಳನ್ನು ಹುಡುಕುತ್ತಾ ಹೋದಾಗ ಎಂದೂ ಯಾರಿಗೂ ದಾನ ಮಾಡಬಾರದು ಎನಿಸುತ್ತದೆ.
ಬೇರೆಯವರಿಗೆ ಕೊಡಬೇಕು ಎಂದು ಇನ್ನೊಬ್ಬರ ಮುಂದೆ ಪೋಜು ಕೊಡುವ ಈ ಸ್ವಯಂಘೋಷಿತ ಸಮಾಜಸೇವಕ ವ್ಯಕ್ತಿ ಈ ಸಮಾಜದ ನಿಜ ಮನುಜರ ಮುಂದೆ ಪ್ರಶ್ನೆಗೆ ಕಾರಣನಾಗಿದ್ದಾನೆ.

ಯಾರಿಗೆ ಸಹಾಯ ಮಾಡಬೇಕು, ದಾನ ಮಾಡಬೇಕು. ನಾಲ್ಕು ಜನರಿಗೆ ಹೇಗೆ ಒಳ್ಳೆಯದು ಮಾಡಬೇಕು.ಕೈಲಾದ ಸಹಾಯ ಹೇಗೆ ಸಾಧ್ಯ ಎಂದು ಆಲೋಚನೆ ಮಾಡುವ ಮನುಷ್ಯರ ನಡುವೆ ಇಂತಹ ಕೆಲವೇ ಕೆಲವು ಕಿಡಿಗೇಡಿಗಳ ವರ್ತನೆ ನಾನಾ ಬದಲಾವಣೆಗಳನ್ನು ತರುತ್ತದೆ. ಯಾರಿಗೆ ಮಾಡಬೇಕು? ಏಕೆ ಮಾಡಬೇಕು? ನಮಗೆ ಅದರಿಂದ ಇಲ್ಲದ ಉಸಾಬರಿ ಏಕೆ? ಹಾಳಾಗಿ ಹೋಗಲಿ ಬಿಡು ಎನ್ನುವ ಮನೋಸ್ಥಿತಿಗೆ ಜನ ತಲುಪುತ್ತಿರುವುದು ಈ ಕೆಲವೇ ಕೆಲವು ಸ್ವಯಂಘೋಷಿತ ಸಮಾಜ ಸೇವಕರಿಂದ ಎಂಬುದು ನಿಜವಾಗಿಯೂ ಕಟು ಸತ್ಯ.
ಯಾರಿಗೂ ಅನಾರೋಗ್ಯವಾಗಿದೆ. ಕೂಡಲೇ ಆಪರೇಷನ್ ಆಗಬೇಕು ಎಂಬ ಘಟನೆಯ ನಡುವೆ ಸಹಾಯ ಕೋರಿ ಹಾಕಿದ್ದ ಫೋನ್ ಪೇ ಗೂಗಲ್ ಪೇ ಫೋನ್ ನಂಬರ್ ಗಳು ಫೋನ್ ನಂಬರ್ ಗಳು ಬಹಳಷ್ಟು ಕಡೆ ಕೆಲವೇ “ಸ್ವಯಂ” ವ್ಯಕ್ತಿಗಳಾಗಿರುತ್ತದೆ. ಅಲ್ಲಿ ನೋಂದವನು ಇರುವುದಿಲ್ಲ. ಸಹಾಯ ಕೇಳುವವನು ಇರುವುದಿಲ್ಲ.
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ನಿಜಕ್ಕೂ ಜೀವನವನ್ನು ವಿಚಿತ್ರವಾಗಿ ಕಂಡೋರ ಹಣದಲ್ಲಿ ಕಳೆಯುವ ಇಂತಹ ವ್ಯಕ್ತಿಗಳಿಂದ ನಿಜವಾಗಿಯೂ ಮನುಷ್ಯ ಸಹಜ ಸಹಾಯದ ಮನೋಭಾವ ಮರೆಮಾಚುತ್ತಿರುವುದು ದುರಂತವಲ್ಲವೇ? ಖಂಡಿತವಾಗಿಯೂ ನಿಜವಾದ ಅಸಹಾಯಕರಿಗೆ ಅಸಬಲರಿಗೆ ಯಾವುದೇ ಲಾಭ ಆಗುತ್ತಿಲ್ಲ. ಬಹಳಷ್ಟು ಕಡೆ ಇದೊಂದು ದಂದೆಯಾಗಿ ಪರಿವರ್ತನೆಯಾಗಿದೆ. ಎಷ್ಟೋ ಕಡೆ ಇಂತಹ ಒಂದು ಘಟನೆ ಮುಂದಿಟ್ಟುಕೊಂಡು ಕಂಡ ಕಂಡ ಫೋನ್ ಗಳಿಗೆ ಫೋನ್ ಮಾಡಿ ನಮ್ಮ ಹಾಸ್ಟೆಲ್ ನಲ್ಲಿ 50 ಬಡ ಮಕ್ಕಳಿದ್ದಾರೆ. ನಮ್ಮ ಅನಾಥಾಶ್ರಮದಲ್ಲಿ ನೂರು ಜನ ವೃದ್ಧರಿದ್ದಾರೆ. ಅವರಿಗೆ ನೀವು ಸಹಾಯ ಮಾಡಿ ಎಂದು ಫೋನ್ ಪೇ ನಂಬರ್ ಕೊಡುವ ವ್ಯಕ್ತಿಗಳನ್ನು ಸಹ ಅದರಲ್ಲೂ ಮಹಿಳಾಮಣಿಗಳನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿಸುವ ಖದೀಮ ಕಳ್ಳಾಟದ ಸ್ವಯಂ ಸಮಾಜ ಸೇವಕರ ವರ್ತನೆಗಳು ನಮ್ಮೊಳಗೆ ನಮ್ಮನ್ನೇ ಪ್ರಶ್ನಿಸುವಂತೆ ಮಾಡಿರುವುದು ಇಂದಿನ ಅತಿ ದೊಡ್ಡ ದುರಂತವಲ್ಲವೇ? ಇಂದಿನ ನೆಗೆಟಿವ್ ಕಾನ್ಸೆಪ್ಟ್ ಅಂದರೆ ಯಾರಿಗೆ ದಾನ ಮಾಡಬೇಕು? ಯಾರಿಗೆ ಕೊಡಬೇಕು ಏಕೆ ಕೊಡಬೇಕು?

ನಿಜವಾಗಿಯೂ ಅವನಿಗೆ ಸಮಸ್ಯೆ ಆಗಿದೆಯಾ? ನಿಜವಾಗಿಯೂ ಅವನು ನೊಂದಿದ್ದಾನಾ ಎಂಬ ಪ್ರಶ್ನೆ ಬಹುತೇಕ ಹುಟ್ಟಲು ಕಾರಣ ಕೆಲ ವಿಕೃತ ಎತ್ತುವಳಿಗಾರರಿಂದ ಎಂದರೆ ತಪ್ಪಾಗಲಿಕ್ಕಿಲ್ಲ.
ಸಮಾಜಮುಖಿಯಾಗಿ ಯೋಚಿಸಿದಾಗ ಕೇವಲ ಸಕಾರಾತ್ಮಕ ಚಿಂತನೆಗಳಿಂದ ಯಾವುದೇ ಪ್ರಯೋಜನವಿಲ್ಲ. ಕೊಡುವುದಾದರೆ ನಿಯತ್ತಿರುವ ಕಡೆ, ನೋಂದ ಕಡೆ ಕೊಡಬೇಕು. ಆದರೆ ಅಲ್ಲಿ ಹೇಗೆ ನಿಯತ್ತು ಹಾಗೂ ನೋಂದ ಜಾಗ ಗೊತ್ತಾಗುತ್ತದೆ ಎಂಬುದುಮತ್ತೊಂದು ಆತಂಕದ ಸಂಗತಿ.
ಯಾರದ್ದೋ ದುಡ್ಡಲ್ಲಿ, ಮತ್ಯಾರೋ ಮಜಾ ಮಾಡುವುದಾದರೆ ಅದನ್ನು ನಾವು ದಾನ ಕೊಟ್ಟೆವು ಎನ್ನುವುದು ಎಷ್ಟರಮಟ್ಟಿಗೆ ಸರಿ. ಅದನ್ನು ಈ ಮನುಷ್ಯ ಮನಸ್ಸು ಹೇಗೆ ಒಪ್ಪಿಕೊಳ್ಳುತ್ತದೆ?
ಮನುಷ್ಯತ್ವ ಸಮಾಜದ ಎಲ್ಲ ನೋವುಗಳಿಗೆ ಸ್ಪಂದಿಸುತ್ತದೆ. ಆದರೆ ಆ ನೋವುಗಳ ಎಳೆಗಳಲ್ಲೇ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಸ್ವಯಂ ಘೋಷಿತ ಸಮಾಜ ಸೇವಕರ ವರ್ತನೆಗಳಿಂದ ಮನುಷ್ಯತ್ವವೇ ಮರೆಯಾಗುತ್ತಿದೆ.


ಇಂದಿನ ನೆಗೆಟಿವ್ ಥಿಂಕಿಂಗ್ ಯೋಚನೆ ಸಮಾಜದಲ್ಲಿ ಮುಖ್ಯ ಆಗಿದೆ. ಇಂದಿನ ಈ ಸಮಾಜದಲ್ಲಿ ನಿಜಕ್ಕೂ ಅತ್ಯಂತ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವ ಬಹಳಷ್ಟು ಜನ ಇದ್ದಾರೆ. ವ್ಯಕ್ತಿಗಳಿದ್ದಾರೆ, ಕೈಯಿಂದ ದಾನ ಮಾಡುತ್ತಾರೆ. ಸಾಧ್ಯವಾದಷ್ಟು ಬೇರೆಯವರಿಂದ ಪಡೆದು ಅವರಿಂದಲೇ ದಾನ ಮಾಡಿಸುತ್ತಾರೆ. ಎಷ್ಟೋ ಸಂಘ-ಸಂಸ್ಥೆಗಳು ನಿಜಕ್ಕೂ ಉದಾರ ನೆರವು ನೀಡಿವೆ. ಕೊಡಿಸುತ್ತಿವೆ. ಅವರನ್ನು ಹೊರತುಪಡಿಸಿದ ಸ್ವಯಂ ಘೋಷಿತ ಎತ್ತುವಳಿದಾರರ ಕುರಿತ ಒಂದು ವಾಸ್ತವದ ಕಥನ ಇದು.

ಸೂಚನೆ: ಈ ಅಂಕಣದಲ್ಲಿ ಬರುವ ಯಾವುದೇ ಪಾತ್ರಗಳು, ಸನ್ನಿವೇಶಗಳು ಯಾರನ್ನೂ ಉದ್ದೇಶಿಸಿ ಬರೆದಿದ್ದಲ್ಲ, ಸಮಾಜದ ಮೂಲೆಮೂಲೆಗಳಿಂದ ಕಂಡುಬಂದ ಹಾಗೂ ಕೇಳಿದ ಮಾತುಗಳಷ್ಟೆ. ಯಾರೂ ಅನ್ಯಥಾ ಭಾವಿಸದಿರಲು ವಿನಂತಿ.

By admin

ನಿಮ್ಮದೊಂದು ಉತ್ತರ

error: Content is protected !!