ಶಿವಮೊಗ್ಗ,ಜು೧೬: ನಗರದ ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ಇದೀಗ  ರಾಜ್ಯ ಮಟ್ಟದ ಅಂಬೆಗಾಲು – ೬ ಕಿರು ಚಿತ್ರ (ಶಾರ್ಟ್ ಫಿಲಂ) ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಜು. ೩೧ರವರೆಗೆ ಅವಕಾಶವನ್ನು ವಿಸ್ತರಿಸಲಾಗಿದೆ ಎಂದು ಬೆಳ್ಳಿಮಂಡಲದ ಕಾರ್ಯಧ್ಯಕ್ಷರು ಹಾಗೂ  ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.

ಈ ಸಂಬಂಧವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ವಿವಿಧೆಡೆಗಳಿಂದ ದಿನಾಂಕ ವಿಸ್ತರಣೆಗೆ ಮನವಿ ಬಂದಿದ್ದು, ಕಿರುಚಿತ್ರ ನಿರ್ಮಾಪಕರು, ನಿರ್ದೇಶಕರ ಆಶಯದಂತೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಜು. ೩೧ರವರೆಗೆ ವಿಸ್ತರಿಸಲಾಗಿದೆ. ಸಿದ್ಧಪಡಿಸಿದ ಕಿರುಚಿತ್ರಗಳನ್ನು ಆ.೩೦ರ ಒಳಗಾಗಿ ಸಲ್ಲಿಸುವಂತೆ ಮನವಿ ಮಾಡಿದರು.

ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು,  ಶೀರ್ಷಿಕೆ ಹಾಗೂ ಟೈಟಲ್ ಕಾರ್ಡ್ ಸೇರಿ ೫ ರಿಂದ ೭ ನಿಮಿಷಗಳ ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು ಎಂದಿರುವ ಅವರು, ಮೊಬೈಲ್ ಸೇರಿದಂತೆ ಯಾವುದೇ

ಕ್ಯಾಮರಾವನ್ನು ಬಳಸಿ ಚಿತ್ರೀಕರಿಸಬಹುದಾಗಿದ್ದು, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಯಾವುದೇ ಮಾಧ್ಯಮಗಳಿಗಿಂದ ದೃಶ್ಯಗಳನ್ನು ಕಟ್ ಅಂಡ್ ಪೇಸ್ಟ್ ಆಗಲೀ, ಸಾಕ್ಷ್ಯಚಿತ್ರವನ್ನಾಗಲೀ ಅಥವಾ ಸಂಪೂರ್ಣ ಎನಿಮೇಷನ್ ಚಿತ್ರಗಳನ್ನಾಗಲೀ ಸ್ಪರ್ಧೆಗೆ ಕಳಿಸುವಂತಿಲ್ಲ. ಸಂಪೂರ್ಣವಾಗಿ ಸ್ವಂತಿಕೆಯ ನಿರ್ದೇಶನದ ಯಾವುದೇ ವಿಷಯವನ್ನು ಕುರಿತು ಕಿರು ಚಿತ್ರ ನಿರ್ಮಿಸಬಹುದು. ಹಾಸ್ಯ ಕಥಾನಕವುಳ್ಳ ಕಿರುಚಿತ್ರಗಳಿಗೆ ವಿಶೇಷ ಆದ್ಯತೆಯಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರು, ಕಲಾವಿದರು  ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. ೫೦,೦೦೦ ರೂಗಳ ಪ್ರಥಮ ಬಹುಮಾನ, ರೂ. ೩೦,೦೦೦ ರೂ.ಗಳ ದ್ವಿತೀಯ ಬಹುಮಾನ ಜೊತೆಗೆ ಶ್ರೇಷ್ಟ ನಟ, ಶ್ರೇಷ್ಟ ನಟಿ, ಶ್ರೇಷ್ಟ ನಿರ್ದೇಶಕ, ಶ್ರೇಷ್ಟ ಕಥೆ-ಚಿತ್ರಕಥೆ, ಶ್ರೇಷ್ಟ ಛಾಯಾಗ್ರಹಣ, ಶ್ರೇಷ್ಟ ಸಂಗೀತ, ಶ್ರೇಷ್ಟ ಸಂಗೀತ ವಿಭಾಗಗಳಲ್ಲಿ ಹತ್ತು ಮಂದಿಗೆ ತಲಾ ೫,೦೦೦ ನಗದು ಆಕರ್ಷಣೀಯ ಸ್ಮರಣಿಕೆಗಳಿವೆ. ಪ್ರಶಸ್ತಿ ಪುರಸ್ಕೃತರಿಗೆ ಅಕ್ಟೋಬರ್ ಮಾಸಾಂತ್ಯದಲ್ಲಿ,  ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

ಕಿರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ೧,೦೦೦ ರೂ.ಗಳ  ಪ್ರವೇಶ ಶುಲ್ಕವಿದ್ದು, ಅರ್ಜಿಗಳನ್ನು ಬಿ.ಹೆಚ್. ರಸ್ತೆಯ ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ಪಡೆದು,  ಭರ್ತಿ ಮಾಡಿ  ಜು.೩೧ರ ಒಳಗಾಗಿ ಸಲ್ಲಿಸಬಹುದು. ಕಿರು ಚಿತ್ರಗಳನ್ನು   ನಾಲ್ಕು ಹೆಚ್‌ಡಿ ಶ್ರೇಣಿಯ ಡಿವಿಡಿ ಸಹಿತ  ಆಗಸ್ಟ್ ೩೦ ಒಳಗಾಗಿ ಸಲ್ಲಿಸಬಹುದು. ಸ್ಪರ್ಧೆಯ ವಿವರಗಳಿಗೆ ವೈದ್ಯ ಸಂಚಾಲಕರು (೯೮೪೪೪ ೫೬೫೦೫, ೮೩೧೦೬ ೭೯೯೨೫), ಡಾ. ನಾಗಭೂಷಣ (೯೪೪೯೨ ೮೪೪೯೫) ಮಂಜುನಾಥ್ (೯೬೮೬೫ ೫೯೯೫೦)ರವರನ್ನು ಸಂಪರ್ಕಿಸಬಹುದು.

By admin

ನಿಮ್ಮದೊಂದು ಉತ್ತರ

error: Content is protected !!