ಶಿವಮೊಗ್ಗ : ಮಕ್ಕಳಲ್ಲಿ ತಮ್ಮ ಭಾವನೆಗಳನ್ನು ಗುರುತಿಸುವ ಮತ್ತು ಸೌಜನ್ಯಯುತವಾಗಿ ಅಭಿವ್ಯಕ್ತಿಗೊಳಿಸುವಂತಹ ಭಾವನಾತ್ಮಕ ಬುದ್ಧಿವಂತಿಕೆ ಬೇಕಿದೆ ಎಂದು ಕಟೀಲ್ ಅಶೋಕ್ ಪೈ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಅಭಿಪ್ರಾಯಪಟ್ಟರು.

ನಗರದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವತಿಯಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಈ ಸಾಲಿನ ವಿದ್ಯಾರ್ಥಿನಿ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ರೀತಿ ಕಲಿಯಬೇಕಾದರೆ, ಪೋಷಕರು ಅಂತಹ ಭಾವನೆಗಳನ್ನು ಸ್ಪಂದಿಸುವ ಬುದ್ಧಿವಂತಿಕೆ ಕಲಿಯಬೇಕಿದೆ. ಈ ಮೂಲಕ ಭಾವನಾತ್ಮಕ ಮತ್ತು ಸಾಮಾಜಿಕ ಬುದ್ಧಿವಂತಿಕೆ ಪೋಷಕರು ಹಾಗೂ ಮಕ್ಕಳಿಗೆ ಬೇಕಿದೆ.

ಜನಸಂಖ್ಯಾ ದಿನಾಚರಣೆಯನ್ನು ಆಚರಿಸುವಾಗ ಗುಣಮಟ್ಟದ ಜನ ಸಂಖ್ಯೆ ಅವಶ್ಯಕತೆಯ ಕುರಿತು ಕಾಳಜಿ ವಹಿಸಬೇಕಿದೆ. ಅಂತಹ ಕಾಳಜಿ ವಿದ್ಯಾವಂತ ಹೆಣ್ಣು ಮಕ್ಕಳ ಸಮೂಹದಿಂದ ಪೂರ್ಣಗೊಳ್ಳಲು ಸಾಧ್ಯ. ಇಂದು ಸಾಧನೆಯ ಯುಗದಲ್ಲಿ ನಾವಿದ್ದೇವೆ. ಯುವ ಸಮೂಹ ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ವೇದಿಕೆಯ ತುಡಿತದಲ್ಲಿದೆ.‌

ಬುದ್ದಿವಂತಿಕೆ ಮತ್ತು ಕೌಶಲ್ಯತೆ ಹೊಂದಿದ ಸಾಮರ್ಥ್ಯ ಯಾವುದೇ ಔಷಧಗಳಿಂದ ಸಿಗುವುದಿಲ್ಲ. ನಮ್ಮಲ್ಲಿರುವ ಸ್ವಯಂ ಪ್ರೇರಣೆ , ಏಕಾಗ್ರತೆ, ಕ್ರಿಯಾಶೀಲತೆಯಿಂದ ಮಾತ್ರ ನಮ್ಮ ಯೋಚನಾ ಶಕ್ತಿ ಹರಿತವಾಗುತ್ತಾ ಹೋಗುತ್ತದೆ. ಸಾಧನೆಯೆಂಬುದು ವೈಯುಕ್ತಿಕ ಉನ್ನತಿಗೆ ಸೀಮಿತವಾಗದೆ ಸಾಮಾಜಿಕವಾಗಿ ಅನುಕೂಲವಾಗುವಂತಹ ಸಾಧನೆಗಳು ನಿಮ್ಮದಾಗಲಿ ಎಂದು ಆಶಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ಕಲಿಕೆಯಲ್ಲಿ ವಿದ್ಯಾರ್ಥಿ ಸಂಘಗಳಂತಹ ಕ್ರಿಯಾಶೀಲ ಚಟುವಟಿಕೆಗಳು ಅತ್ಯವಶ್ಯಕ. ಅದು ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಸಮಾಜದಲ್ಲಿ ಪ್ರಬುದ್ಧ ವರ್ತನೆಗಳನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಸ್ತೂರಬಾ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಕೆ.ಆರ್.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಬಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್.ಎಸ್.ಆರ್, ವಿದ್ಯಾರ್ಥಿನಿ ಸಂಘದ ಪ್ರಧಾನಿ ಮದೀಹ, ವಿರೋಧ ಪಕ್ಷದ ನಾಯಕಿ ಕಾವ್ಯ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!