ಶಿವಮೊಗ್ಗ,ಜು.೯: ಸರ್ಕಾರಿ ಶಾಲೆಗಳು ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಲ್ಲಿ ಇಲಾಖೆಯ ಜೊತೆಗೆ ಶಿಕ್ಷಕರು, ಪೋಷಕರು, ಸಹಕರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ಹೇಳಿದರು.
ಅವರು ಇಂದು ಗುತ್ಯಪ್ಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿಕಲಿ ಕ್ರೀಯಶೀಲ ತಾರೆಯರು, ಯುವ ಪೌಂಡೇಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದು ಸ್ಪರ್ಧಾತ್ಮಕ ಯುಗವಾಗಿದೆ. ಬಡ ಹಿಂದುಳಿದ, ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಕಲಿಯುವುದೇ ಕಷ್ಟಕರವಾಗಿದೆ. ಆರ್ಥಿಕವಾಗಿ ಶ್ರೀಮಂತವಾಗಿರುವರು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ. ಆದರೆ ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾಗಿದೆ. ಸರ್ಕಾರ ಇದಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಸರ್ಕಾರಿ ಶಾಲೆಗಳು ಉಳಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಕರು ದಾಖಲಾತಿಯನ್ನು ಹೆಚ್ಚಿಸಿರುವುದರ ಜೊತೆಗೆ ಹಾಜರಾತಿಗೂ ಆದ್ಯತೆ ನೀಡಿ ಗುಣಾತ್ಮಕ ಶಿಕ್ಷಣವನ್ನು ನೀಡಬೇಕು ಎಂದರು.
ನಲಿಕಲಿ ಕ್ರೀಯಶೀಲ ತಂಡದ ಮುಖ್ಯಸ್ಥೆ ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಶಿಕ್ಷಕಿ ಪೌಜಿಯಾ ಸಾರವತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳು ಹೆಚ್ಚಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅನುಕೂಲವಾಗಲು ದಾನಿಗಳ ಸಹಾಯ ಅತಿ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಯುವ ಪೌಂಡೇಷನ್ ಜಿಲ್ಲೆಯ ಹಲವು ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳನ್ನು ನೀಡುತ್ತ ಬಂದಿರುವುದು ಅತ್ಯಂತ ಶ್ಲಾಘನೀಯವಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಕೂಡ ಕನ್ನಡ ಶಾಲೆ ಉಳಿಯಲು ಪ್ರಾಮಾಣಿಕವಾಗಿ ಸಹಕರಿಸುತ್ತಿದ್ದಾರೆ ಎಂದರು.
ಖ್ಯಾತ ವಕೀಲ ಹಾಗೂ ಶಾಲೆಯ ಮೇಲುಸ್ತುವಾರಿ ಸದಸ್ಯ ಕೆ.ಪಿ.ಶ್ರೀಪಾಲ್ ಮಾತನಾಡಿ, ಸಮಾಜಮುಖಿ ಕೆಲಸಗಳು ಇಂದು ಬೇಕಾಗಿದೆ. ಬಂಡವಾಳಗಾರರೇ ಶಿಕ್ಷಣವನ್ನು ವಿಜೃಂಭಿಸುತ್ತಿರುವಾಗ ಕನ್ನಡ ಶಾಲೆಗಳು ಬದುಕುವುದೇ ಕಷ್ಟವಾಗಿದೆ. ದೇವಸ್ಥಾನದ ಘಂಟೆಗಳಿಗಿಂತ ಶಾಲೆಯ ಘಂಟೆಗಳು ಹೆಚ್ಚಾಗಿ ಭಾರಿಸಬೇಕಾಗಿದೆ. ಶಾಲೆಯೇ ಗುಡಿ ಮಕ್ಕಳೇ ದೇವರು ಎಂದರಲ್ಲದೆ, ಶಾಲೆಗೆ ಧನ ಸಹಾಯ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದಾನಿಗಳಾದ ಮಹಾಲಿಂಗಶಾಸ್ತ್ರಿ, ಭುಜಂಗಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಮೀರ್ ಪಾಷಾ, ಡಯಟ್ ಉಪನ್ಯಾಸಕಿ ರೇಣುಕಾ, ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್,ಮೋಹನ್ ಮುಂತಾದವರು ಇದ್ದರು. ವಿದ್ಯಾರ್ಥಿನಿ ಸುಹಾನ ಪ್ರಾರ್ಥಿಸಿದರು. ಸಹಶಿಕ್ಷಕಿ ಭಾಗೀರಥಿ ನಿರೂಪಿಸಿ ಮುಖ್ಯೋಪಧ್ಯಾಯನಿ ರುಕ್ಮಿಣಿ ಸ್ವಾಗತಿಸಿದರು.